ಹೊನ್ನಾವರ: ಕಾಸರಕೋಡ ಗ್ರಾ ಪಂ ವ್ಯಾಪ್ತಿಯ ಕಳಸಿನಮೊಟೆ ಶಾಲೆಗೆ ಪ್ರತಿ ವರ್ಷ ಮಳೆ ನೀರು ನುಗ್ಗುತ್ತಿದ್ದು, ಈ ಬಾರಿ ಸಹ ಅದೇ ಸಮಸ್ಯೆ ಮುಂದುವರೆದಿದೆ. ಇದರಿಂದ ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿದ್ದಾರೆ.ತಗ್ಗು ಪ್ರದೇಶದಲ್ಲಿ ಶಾಲೆಯಿದ್ದು, ಜೂನ್ ತಿಂಗಳಿನಲ್ಲಿ ಶಾಲಾ ಮಕ್ಕಳು ಜ್ವರ-ನೆಗಡಿಯಿಂದ ಬಳಲುವುದು ಸಾಮಾನ್ಯ. ಶಾಲೆ ಅಂಗಳದಲ್ಲಿ ಪೂರ್ತಿಯಾಗಿ ನೀರು ನಿಂತಿದ್ದು, ಶಾಲೆ ಪ್ರವೇಶಿಸಲು ಮಕ್ಕಳಿಂದ
ಸಾಧ್ಯವಾಗುತ್ತಿಲ್ಲ. ಶಾಲೆ ಸುತ್ತಲು ನೀರು ನಿಲ್ಲುವುದರಿಂದ ಕಟ್ಟಡಕ್ಕೂ ಅಪಾಯ ಎದುರಾಗಿದೆ. ಈ ಬಗ್ಗೆ ಅಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ಸ್ಥಳೀಯರು ದೂರು ನೀಡಿದರೂ ಪ್ರಯೋಜನವಾಗಿಲ್ಲ.ಮಕ್ಕಳ ಸಮಸ್ಯೆ ಅರಿತು ದಾನಿಯೊಬ್ಬರು ಶಾಲೆಗಾಗಿ 23 ಗುಂಟೆ ಜಾಗ ದಾನ ನೀಡಿದ್ದಾರೆ. ಶಾಲಾ ಕಟ್ಟಡವನ್ನು ಅಲ್ಲಿ ಸ್ಥಳಾಂತರ ಮಾಡುವುದಾಗಿ 2013ರಿಂದ ಜನಪ್ರತಿನಿಧಿಗಳು ಹೇಳುತ್ತಿದ್ದಾರೆ. 2014ರಲ್ಲಿ ಹೊಸ ಕಟ್ಟಡ ಕಾಮಗಾರಿ ಶುರುವಾಗಿದ್ದು, ಅಲ್ಲಿಯೂ ಸೋರುತ್ತಿದ್ದು ಹೀಗಾಗಿ ಅಲ್ಲಿ ಸಹ ಮಕ್ಕಳಿಗೆ ಸುರಕ್ಷತೆ ಇಲ್ಲದಂತಾಗಿದೆ.