ಉಡುಪಿ: ಕೊಂಕಣ ರೈಲು ಮಾರ್ಗದ ಇನ್ನಂಜೆ ಹಾಗೂ ಪಡುಬಿದ್ರಿ ನಡುವಿನ ರೈಲ್ವೆ ಹಳಿಯಲ್ಲಿ ವೆಲ್ಡಿಂಗ್ ಜಾಯಿಂಟ್ ಬಿಟ್ಟಿರುವುದನ್ನು ಪತ್ತೆ ಹಚ್ಚುವ ಮೂಲಕ ರೈಲ್ವೆ ಜಾಗೃತ ಹಳಿ ನಿರ್ವಾಹಕ ಪ್ರದೀಪ್ ಶೆಟ್ಟಿ ಸಂಭಾವ್ಯ ಅವಘಡ ತಪ್ಪಿಸಿದ್ದಾರೆ.
ಮಧ್ಯರಾತ್ರಿ 2.25ರ ಸುಮಾರಿಗೆ ಹಳಿ ಜಾಯಿಂಟ್ ಬಿಟ್ಟಿರುವುದನ್ನು ಗಮನಿಸಿದ ಪ್ರದೀಪ್ ಶೆಟ್ಟಿ, ತಕ್ಷಣ ಉಡುಪಿಯ ಆರ್‌ಎಂಇ ಗಮನಕ್ಕೆ ತಂದಿದ್ದಾರೆ. ಕೂಡಲೇ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಹಳಿ ದುರಸ್ತಿಗೊಳಿಸಿ ಸಮಸ್ಯೆ ಪರಿಹರಿಸಿದ್ದಾರೆ.
ದುರಸ್ತಿ ಹಿನ್ನೆಲೆಯಲ್ಲಿ ಹಲವು ರೈಲುಗಳ ಸಂಚಾರ ವ್ಯತ್ಯಯ ವಾಗಿದ್ದು, ರೈಲುಗಳನ್ನು ಉಡುಪಿ ಹಾಗೂ ಸುರತ್ಕಲ್ ನಿಲ್ದಾಣಗಳಲ್ಲಿ ಕೆಲಹೊತ್ತು ತಡೆ ಹಿಡಿಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರವಾರಕ್ಕೆ ಹೋಗುವ ಪಂಚಗಂಗಾ ಎಕ್ಸ್‌ಪ್ರೆಸ್‌ನಲ್ಲಿದ್ದ ಪ್ರಯಾಣಿಕ ವಿಶಾಲ್ ಶೆಣೈ, ಪಡುಬಿದ್ರಿಯಿಂದ ದಕ್ಷಿಣಕ್ಕೆ ಸುಮಾರು 9 ಕಿ.ಮೀ. ದೂರದಲ್ಲಿರುವ ನಂದಿಕೂರು ನಿಲ್ದಾಣದಲ್ಲಿ ರೈಲನ್ನು ತಡೆಹಿಡಿಯಲಾಗಿದೆ ಎಂದು ವಿವರಿಸಿದ್ದಾರೆ.ಅದೇ ಸಮಯದಲ್ಲಿ, ಉಡುಪಿಯಿಂದ ಮುಂಜಾನೆ 3 ಗಂಟೆಗೆ ಮಂಗಳೂರು ಜಂಕ್ಷನ್ ಕಡೆಗೆ ಹೊರಡಬೇಕಿದ್ದ ರೈಲು ಸಂಖ್ಯೆ 16345 ಮುಂಬೈ ಎಲ್‌ಟಿಟಿ-ತಿರುವನಂತಪುರಂ ಸೆಂಟ್ರಲ್ ನೇತ್ರಾವತಿ ಎಕ್ಸ್‌ಪ್ರೆಸ್ ರೈಲನ್ನು ಇನ್ನಂಜೆಯಲ್ಲಿ, ಮುಂಜಾನೆ 4 ಗಂಟೆ ಸುಮಾರಿಗೆ ಹಾದು ಹೋಗಬೇಕಿದ್ದ ರೈಲು ಸಂಖ್ಯೆ 16595 ಕೆಎಸ್‌ಆರ್ ಬೆಂಗಳೂರು-ಕಾರವಾರ ಪಂಚಗಂಗಾ ಎಕ್ಸ್‌ಪ್ರೆಸ್ ಎರಡೂ ರೈಲುಗಳನ್ನು ಹಳಿ ದೋಷವನ್ನು ಸರಿಪಡಿಸುವವರೆಗೂ ತಡೆಹಿಡಿಯಲಾಗಿತ್ತು.
20 ಕಿ.ಮೀ ವೇಗದ ನಿರ್ಬಂಧದೊಂದಿಗೆ ಹಳಿ ಕಾರ್ಯಾಚರಣೆಗೆ ಯೋಗ್ಯವಾಗಿದೆ ಎಂದು ಪ್ರಮಾಣೀಕರಿಸಿದ ನಂತರ ರೈಲು ಸಂಚಾರವನ್ನು ಮರುಸ್ಥಾಪಿಸಲಾಗಿದೆ ಎಂದು ಕೊಂಕಣ ರೈಲ್ವೆಯ ಸಾರ್ವಜನಿಕ ಸಂಪರ್ಕ ವಿಭಾಗದ ವ್ಯವಸ್ಥಾಪಕಿ ಸುಧಾ ಕೃಷ್ಣಮೂರ್ತಿ ತಿಳಿಸಿದ್ದಾರೆ.
ತಾಪಮಾನದಲ್ಲಿನ ಹಠಾತ್ ಕುಸಿತದಿಂದ ಕೆಲವೊಮ್ಮೆ ವೆಲ್ಡಿಂಗ್ ಜಾಯಿಂಟ್ ಬಿಟ್ಟುಕೊಳ್ಳುತ್ತದೆ ಎಂದು ಕೊಂಕಣ ರೈಲ್ವೆಯ ಪ್ರಾದೇಶಿಕ ರೈಲ್ವೆ ವ್ಯವಸ್ಥಾಪಕ ಬಿ ಬಿ ನಿಕಮ್ ಹೇಳಿದ್ದಾರೆ.
ಈ ನಡುವೆ ಜಾಗೃತ ಹಳಿ ನಿರ್ವಾಹಕ ಪ್ರದೀಪ್ ಶೆಟ್ಟಿ ಅವರ ಕರ್ತವ್ಯಕ್ಕೆ ಮೆಚ್ಚಿ ಕೊಂಕಣ ರೈಲ್ವೆಯ ನೂತನ ಸಿಎಂಡಿ ಸಂತೋಷ ಕುಮಾರ್ ಝಾ ರೂ.25 ಸಾವಿರ ನಗದು ಬಹುಮಾನ ಘೋಷಿಸಿದ್ದಾರೆ.
ಅದರಂತೆ ಉಡುಪಿಯ ಹಿರಿಯ ಎಂಜಿನಿಯರ್ ಗೋಪಾಲಕೃಷ್ಣ ಹಳಿ ದುರಸ್ತಿ ನಡೆದ ಸ್ಥಳದಲ್ಲಿಯೇ ಪ್ರದೀಪ್ ಶೆಟ್ಟಿ ಅವರಿಗೆ ಬಹುಮಾನದ ಚೆಕ್ ಹಸ್ತಾಂತರಿಸಿ ಶ್ಲಾಘಿಸಿದರು.