ಚಕ್ರವರ್ತಿ ಸೂಲಿಬೆಲೆಗೆ ವೀರ ಸಾವರ್ಕರ್ ಸಮ್ಮಾನ್- 2024 ಪ್ರಶಸ್ತಿ ಪ್ರದಾನ

ಚಕ್ರವರ್ತಿ ಸೂಲಿಬೆಲೆಗೆ ವೀರ ಸಾವರ್ಕರ್ ಸಮ್ಮಾನ್- 2024 ಪ್ರಶಸ್ತಿ ಪ್ರದಾನ

Share

ಮೈಸೂರು: ಭಾಷಣ ಹಾಗೂ ಲೇಖನಗಳಿಂದ ಯುವ ಪೀಳಿಗೆಯ ಜನರಲ್ಲಿ ದೇಶಭಕ್ತಿ ಜಾಗೃತಗೊಳಿಸಿ ಅವರನ್ನು ನದಿ ಸ್ವಚ್ಛತೆ, ದೇಗುಲ ಜೀರ್ಣೋದ್ದಾರ, ಗೋಪಾಲನೆ, ಬಡವರಿಗೆ ಮನೆ ನಿರ್ಮಾಣ, ಸರ್ಕಾರಿ ಶಾಲೆಗಳಿಗೆ ಸುಣ್ಣ-ಬಣ್ಣ ಸೇರಿ ಸೇವಾ ಕ್ಷೇತ್ರದೆಡೆಗೆ ಆಕರ್ಷಿಸಿ ಯುವ ಬ್ರಿಗೇಡ್ ಸಂಘಟನೆಯನ್ನು ಕಟ್ಟುತ್ತಿರುವ ಚಕ್ರವರ್ತಿ ಸೂಲಿಬೆಲೆ ಅವರಿಗೆ ಈ ವರ್ಷದ ವೀರ ಸಾವರ್ಕರ್ ಸಮ್ಮಾನ್ ಪ್ರಶಸ್ತಿ – 2024 ಯನ್ನು ನೀಡಲಾಗುತ್ತಿದೆ ಎಂದು ಪ್ರತಿಷ್ಠಾನದ ಸದಸ್ಯ ರಾಕೇಶ್ ಭಟ್ ಅವರು ಭಾನುವಾರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವಜನರಲ್ಲಿ ದೇಶಪ್ರೇಮವನ್ನು ತುಂಬುವಲ್ಲಿ ಭಾಷಣ ಮತ್ತು ಬರಹಗಳ ಮೂಲಕ ಕೊಡುಗೆ ನೀಡಿದ ಚಕ್ರವರ್ತಿ ಸೂಲಿಬೆಲೆ ಅವರಿಗೆ ಈ ವರ್ಷದ ‘ವೀರ್ ಸಾವರ್ಕರ್ ಸಮ್ಮಾನ್ ಪ್ರಶಸ್ತಿ-2024’ ಪ್ರದಾನ ಮಾಡಲಾಗುತ್ತಿದೆ. ಪ್ರಶಸ್ತಿಯು ರೂ.1 ಲಕ್ಷ ನಗದು, ಸಾವರ್ಕರ್ ಪುತ್ಥಳಿ ಹಾಗೂ ಫಲಕ ಹೊಂದಿದೆ. ಈ ಪ್ರಶಸ್ತಿಯನ್ನು ಮೇ 28ರಂದು ಸಂಜೆ 5.30ಕ್ಕೆ ನಗರದ ಕರ್ನಾಟಕ ಕಲಾಮಂದಿರ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುತ್ತದೆ ಎಂದು ಹೇಳಿದರು.ಮಧ್ಯಾಹ್ನ 2 ಗಂಟೆಗೆ ಸಾವರ್ಕರ್ ವೇಷಭೂಷಣ, ಚಿತ್ರಕಲೆ ಹಾಗೂ ರಂಗೋಲಿ ಸ್ಪರ್ಧೆ ನಡೆಯಲಿದೆ. ಈಗಾಗಲೇ ಮೊಬೈಲ್ ಮೂಲಕ ಸಾವರ್ಕರ್ ಕುರಿತು ಮಾಡಿರುವ ರೀಲ್ಸ್ ಗಳನ್ನು ಪಡೆಯಲಾಗುತ್ತಿದೆ. ಪ್ರತಿ ಸ್ಪರ್ಧೆಯ ವಿಜೇತರಿಗೆ ಪ್ರಥಮ ಬಹುಮಾನವಾಗಿ 5 ಸಾವಿರ, ದ್ವಿತೀಯ ಬಹುಮಾನವಾಗಿ 3 ಸಾವಿರ, ತೃತೀಯ ಬಹುಮಾನವಾಗಿ 1000 ನಗದು ಬಹುಮಾನದ ಜೊತೆಗೆ ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಪತ್ರ ನೀಡಲಾಗುತ್ತದೆ.

ಸಮಾರಂಭದಲ್ಲಿ ಸರಸ್ವತಿ ಸಮ್ಮಾನ್ ಪುರಸ್ಕೃತರಾದ ಖ್ಯಾತ ಲೇಖಕ ಡಾ.ಎಸ್.ಎಲ್.ಭೈರಪ್ಪ ಆಗಮಿಸಲಿದ್ದು, ಪತ್ರಕರ್ತ ಅಜಿತ್ ಹನುಮಕ್ಕನವರ್ ಭಾಷಣ ಮಾಡಲಿದ್ದಾರೆಂದು ತಿಳಿಸಿದರು.

ಸಾವರ್ಕರ್ ಅವರ ಕುರಿತು ಸಂಶೋಧನೆ ಮತ್ತು ಪುಸ್ತಕಗಳ ಪ್ರಕಟಣೆಗಾಗಿ ಕಳೆದ ವರ್ಷ ವಿಕ್ರಮ್ ಸಂಪತ್ ಅವರಿಗೆ ‘ವೀರ್ ಸಾವರ್ಕರ್ ಸಮ್ಮಾನ್ ಪ್ರಶಸ್ತಿ’ಯನ್ನು ನೀಡಲಾಗಿತ್ತು.


Share