ದಾವಣಗೆರೆ: ಜಿಲ್ಲೆಯ ಚನ್ನಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿ, ವಾಹನಗಳನ್ನು ಜಖಂಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ 25 ಜನರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಚನ್ನಗಿರಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸಂಭವಿಸಿದ ಲಾಕಪ್ ಡೆತ್‌ಗೆ ಸಂಬಂಧಿಸಿದಂತೆ ಕೋಪಗೊಂಡ ಗುಂಪೊಂದು ಠಾಣೆಯನ್ನು ಧ್ವಂಸಗೊಳಿಸಿತ್ತು ಮತ್ತು ಹಲವಾರು ವಾಹನಗಳಿಗೆ ಹಾನಿಯುಂಟುಮಾಡಿತ್ತು. ಘಟನೆಯಲ್ಲಿ ಕನಿಷ್ಠ 11 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ಇದೀಗ ಪ್ರಕರಣದ ತನಿಖೆಯನ್ನು ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ವಹಿಸಲಾಗಿದೆ.
ಐಪಿಸಿ ಸೆಕ್ಷನ್ 353 (ಸಾರ್ವಜನಿಕ ಸೇವಕನ ಕರ್ತವ್ಯಕ್ಕೆ ಅಡ್ಡಿ, ಹಲ್ಲೆ ಅಥವಾ ಕ್ರಿಮಿನಲ್ ಬಲ) ಮತ್ತು 307 (ಕೊಲೆ ಯತ್ನ) ಅಡಿಯಲ್ಲಿ ಪೊಲೀಸ್ ಠಾಣೆ, ಸಿಬ್ಬಂದಿ ಮತ್ತು ಆಸ್ತಿಗಳ ಮೇಲಿನ ಗುಂಪು ದಾಳಿಗೆ ಸಂಬಂಧಿಸಿದಂತೆ 25 ಜನರನ್ನು ಬಂಧಿಸಲಾಗಿದೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಘಟನೆಯ ತನಿಖೆಗಾಗಿ ಐದು ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಮತ್ತು ಸಿಸಿಟಿವಿ ದೃಶ್ಯಾವಳಿಗಳು ಮತ್ತು ಲಭ್ಯವಿರುವ ವಿಡಿಯೋ ತುಣುಕುಗಳನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.ಮಟ್ಕಾ ಜೂಜಾಟ ನಡೆಸುತ್ತಿದ್ದ ಆರೋಪದಡಿ ಆದಿಲ್ (30) ಎಂಬಾತನನ್ನು ಮೇ 24ರಂದು ಬಂಧಿಸಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿತ್ತು. ನಂತರ ಆತನ ಆರೋಗ್ಯ ಸ್ಥಿತಿ ಹದಗೆಟ್ಟಿತು ಮತ್ತು ಆತ ಠಾಣೆಯಲ್ಲಿಯೇ ಮೃತಪಟ್ಟಿದ್ದರು. ಆದಿಲ್ ಅವರದ್ದು ಲಾಕಪ್ ಡೆತ್ ಎಂದು ಆರೋಪಿಸಿ ಉದ್ರಿಕ್ತರ ಗುಂಪು ಶುಕ್ರವಾರ ತಡರಾತ್ರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಠಾಣೆ ಮೇಲೆ ನಡೆದ ದಾಳಿಯ ಹಿನ್ನೆಲೆಯಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಚನ್ನಗಿರಿ ಠಾಣೆ ಇನ್ಸ್ ಪೆಕ್ಟರ್ ಅವರನ್ನು ಅಮಾನತು ಮಾಡಲಾಗಿದೆ.ಗೃಹ ಸಚಿವ ಜಿ ಪರಮೇಶ್ವರ ಮಾತನಾಡಿ, ಪೊಲೀಸರ ಕಡೆಯಿಂದಾದ ನಿರ್ಲಕ್ಷ್ಯದ ಕಾರಣದಿಂದಾಗಿ ಉಪ ಎಸ್ಪಿ ಮತ್ತು ಇನ್ಸ್‌ಪೆಕ್ಟರ್ ಅನ್ನು ಅಮಾನತುಗೊಳಿಸಲಾಗಿದೆ. ತನಿಖೆಗೆ ಆದೇಶಿಸಲಾಗಿದೆ. ಘಟನೆ ನಡೆಯಬಾರದಿತ್ತು. ನಾವು ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಆತ (ಮೃತ) ಮಟ್ಕಾ ಜೂಜಿನಲ್ಲಿ ತೊಡಗಿಸಿಕೊಂಡಿದ್ದರಿಂದ, ಪೊಲೀಸರು ಆತನನ್ನು ಬಂಧಿಸಿದ್ದರು. ಆ ಸಮಯದಲ್ಲಿ ಅವನಿಗೆ ಉಂಟಾದ ಕೆಲವು ಆರೋಗ್ಯ ಸಮಸ್ಯೆಯಿಂದಾಗಿ ಆತ ಸಾವಿಗೀಡಾಗಿದ್ದಾನೆ. ಮರಣೋತ್ತರ ಪರೀಕ್ಷೆಯ ವರದಿಯಿಂದ ಈ ಬಗ್ಗೆ ತಿಳಿಯಲಿದೆ ಎಂದು ಅವರು ಹೇಳಿದರು.
ಲಂಚ ನೀಡದ ಕಾರಣ ಪೊಲೀಸರು ಆತನನ್ನು ಬಂಧಿಸಿದ್ದಾರೆಯೇ ಎಂಬುದು ವಿಚಾರಣೆಯಿಂದ ಗೊತ್ತಾಗಲಿದೆ. ಒಂದು ವೇಳೆ ಅಂತಹ ಭಾಗಿದಾರಿಕೆ ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು. ನಾವು ಅವರನ್ನು (ಅಧಿಕಾರಿಗಳನ್ನು) ವಜಾ ಮಾಡುತ್ತೇವೆ ಎಂದರು.