ಬೆಂಗಳೂರು: ರಾಜ್ಯದಲ್ಲಿ ಮುಂದಿನ ಒಂದು ವಾರಗಳ ಕಾಲ ಬೆಂಗಳೂರು, ಶಿವಮೊಗ್ಗ, ಕೊಡಗು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಮೈಸೂರು, ಶಿವಮೊಗ್ಗದಲ್ಲಿ ಮಳೆಯಾಗಲಿದೆ.
ಇಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೆಲವು ಕಡೆಗಳಲ್ಲಿ ಗುಡುಗು ಸಹಿತ ಗಾಳಿಯೊಂದಿಗೆ ಮಳೆಯಾಗಲಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ವಿಜಯಪುರ, ಯಾದಗಿರಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಳೆಯಾಗಲಿದೆ. ರಾಜ್ಯಕ್ಕೆ ಮೇ 31ರಂದು ಮುಂಗಾರು ಪ್ರವೇಶಿಸಲಿದೆ.ಯೆಲ್ಲೋ ಮತ್ತು ರೆಡ್ ಅಲರ್ಟ್ ಘೋಷಿಸಲಾಗಿದೆ.
ಲಾಡ್ಲಾಪುರ ಗ್ರಾಮದ ಬಳಿ ಸಿಡಿಲು ಬಡಿದು ಇಬ್ಬರ ಸಾವು:
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದ ಬಳಿ ಸಿಡಿಲು ಬಡಿದು ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಏಕನಾಥ್ ವಾಘಮೂಡೆ(55) ಹಾಗೂ ಸತೀಶ್ ಶಳಕೆ(40) ಮೃತರು. ಇಬ್ಬರೂ ವಾಡಿ ಪಟ್ಟಣದ ರೈಲ್ವೆ ಕಾಲೋನಿಯ ನಿವಾಸಿಗಳಾಗಿದ್ದು, ಮಳೆ ಬಂದ ಹಿನ್ನೆಲೆ ಮರದಡಿ ನಿಂತಿದ್ದಾಗ ಸಿಡಿಲು ಬಡಿದು ಕೊನೆಯುಸಿರೆಳೆದಿದ್ದಾರೆ. ಈ ಕುರಿತು ವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಯಾದಗಿರಿಯಲ್ಲಿ ಮಳೆಗೆ ಕರೆಯಂತಾದ ಬಡಾವಣೆ:
ಬಿರುಗಾಳಿ ಸಹಿತ ಬಾರಿ ಮಳೆ ಹಿನ್ನಲೆ ಯಾದಗಿರಿ ನಗರದ ಹೊಸಹಳ್ಳಿ ಕ್ರಾಸ್ ಬಳಿಯ ಬಡಾವಣೆ ಕರೆಯಂತಾಗಿದೆ. ಮನೆಗಳ ಸುತ್ತ ಮಳೆ ನೀರು ಆವರಿಸಿಕೊಂಡಿದ್ದು, ಮಳೆ ನಿಂತ ಮೇಲೂ ಮನೆಯಿಂದ ಹೊರ ಬರಲಾಗದೆ ನಿವಾಸಿಗಳ ಪರದಾಟ ನಡೆಸಿದ್ದಾರೆ. ಸತತ ಮೂರು ಗಂಟೆಗಳ ಕಾಲ ಸುರಿದಿರುವ ಮಳೆಯಿಂದ ರಸ್ತೆ ಮೇಲೂ ಸಹ ನೀರು ಆವರಿಸಿಕೊಂಡಿದೆ. ಇದರಿಂದ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ. ಇನ್ನು ವಿದ್ಯುತ್ ಕಂಬಗಳು, ಬೃಹತ್ ಮರಗಳು ಸಹ ನೆಲಕ್ಕುರಳಿದ್ದರಿಂದ ವಾಹನ ಸಂಚಾರಕ್ಕೂ ಅಡಚಣೆ ಆಗಿದೆ.