ಹೊನ್ನಾವರ: ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಏಷ್ಯನ್ ಪೆಸಿಫಿಕ್ ಯೋಗಾಸನ ಚಾಂಪಿಯನ್‌ಶಿಪ್‌ನಲ್ಲಿ ಹೊನ್ನಾವರದ ಖರ್ವಾ ನಾಥಗೇರಿಯ ಮಹೇಂದ್ರ ಗೌಡ ಚಿನ್ನದ ಪದಕ ಪಡೆದು ಸಾಧನೆ ಮಾಡಿದ್ದಾನೆ. ಆರ್ಟಿಸ್ಟಿಕ್ ಯೋಗದಲ್ಲಿ ಪ್ರಥಮ ಸ್ಥಾನ ಹಾಗೂ ಟ್ರೇಡಿಸನಲ್ ಯೋಗದಲ್ಲಿ ದ್ವೀತೀಯ ಸ್ಥಾನ ಪಡೆದು, ಬಂಗಾರ ಹಾಗೂ ಬೆಳ್ಳಿ ಪದಕವನ್ನು ಪಡೆದಿದ್ದಾನೆ.ಹೊನ್ನಾವರ ತಾಲೂಕಿನ ಖರ್ವಾ ಗ್ರಾಮದ ನಾಥಗೇರಿಯ ಗಣಪತಿ ಗೌಡ, ಮಹಾಲಕ್ಷ್ಮೀ ಗೌಡ ದಂಪತಿಯ ಪುತ್ರನಾಗಿರುವ ಮಹೇಂದ್ರ ಗೌಡ ಪ್ರಾಥಮಿಕ, ಪ್ರೌಢ ಶಾಲಾ ಹಂತದಲ್ಲಿಯೇ ಅದ್ಬುತ ಯೋಗ ಪಟುವಾಗಿದ್ದನು. ಖರ್ವಾ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ೭ನೇ ತರಗತಿ ವ್ಯಾಸಂಗದಲ್ಲಿದ್ದಾಗ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವೀತಿಯ ಸ್ಥಾನಗಳಿಸಿ ಬೆಳ್ಳಿ ಪದಕ ಪಡೆದಿದ್ದನು.ಪ್ರಾರಂಭದಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿ ರಾಜೇಶ್ವರಿ ಹೆಗಡೆ ಅವರ ಮಾರ್ಗದರ್ಶನದಲ್ಲಿ ಯೋಗ ಶಿಕ್ಷಣವನ್ನು ಕಲಿತಿದ್ದನು. ನಂತರ ನಿರಂತರವಾಗಿ ರಾಜ್ಯ, ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಗಳಲ್ಲಿ ಕಾಲೇಜನ್ನು ಪ್ರತಿನಿಧಿಸುತ್ತಾ ಬರುತ್ತಿದ್ದಾನೆ. ಬೆಂಗಳೂರಿನ ಇಂಡಿಪೆಡೆಟ್ ಮ್ಯಾನೆಜ್‌ಮೆಂಟ್ ಸ್ಟಡಿಸ್ ನಲ್ಲಿ ಬಿಕಾಂ ಪದವಿ ವ್ಯಾಸಂಗದಲ್ಲಿದ್ದಾನೆ. ಇಲ್ಲಿ ರಾಜೇಶ್ ಆಚಾರಿ ಎನ್ನುವವರಿಂದ ಉತ್ತಮ ತರಬೇತಿ ಪಡೆದಿದ್ದಾರೆ.