ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳು ಕೈಗಾರಿಕೆ, ಕೃಷಿ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಬೆಳವಣಿಗೆಯಾಗುತ್ತಿದ್ದು, ವರ್ಷದಿಂದ ವರ್ಷಕ್ಕೆ ಈ ಭಾಗದಲ್ಲಿ ರೈಲು ಪ್ರಯಾಣಿಕರ ಸಂಖ್ಯೆ ಅಧಿಕವಾಗುತ್ತಾ ಸಾಗಿದೆ. ಅಲ್ಲದೇ ಈ ಜಿಲ್ಲೆಗಳಿಂದ ನೈಋತ್ಯ ರೈಲ್ವೇ ವಲಯಕ್ಕೆ ಅತ್ಯಧಿಕ ಆದಾಯವಿದ್ದರೂ, ಈ ಭಾಗದ ಜನರ ನಿರೀಕ್ಷೆಗೆ ತಕ್ಕಂತೆ ಸೌಲಭ್ಯಗಳು ದೊರೆಯುತ್ತಿಲ್ಲ. ಈ ಅಂಶವನ್ನು ನೂತನ ರೈಲ್ವೇ ಖಾತೆ ರಾಜ್ಯ ಸಚಿವರಾದ ವಿ.ಸೋಮಣ್ಣ, ಹಾಗೂ ನೈಋತ್ಯ ರೈಲ್ವೇ ವಲಯದ ಪ್ರಧಾನ ವ್ಯವಸ್ಥಾಪಕರ ಗಮನಕ್ಕೆ ತಂದಿರುವ ವಲಯ ರೈಲ್ವೇ ಬಳಕೆದಾರರು ಮತ್ತು ರಾಷ್ಟಿçಯ ರೈಲ್ವೇ ಬಳಕೆದಾರರ ಸಲಹಾ ಸಮಿತಿಯ ಹಿರಿಯ ಸದಸ್ಯರಾದ ಬಾಬುಲಾಲ್ ಜೈನ್ ಅವರು ಕೆಳಕಂಡ ಬೇಡಿಕೆಗಳ ಅನುಷ್ಠಾನಕ್ಕೆ ಮನವಿ ಸಲ್ಲಿಸಿದ್ದಾರೆ.
೧)ಗಾಡಿ ಸಂಖ್ಯೆ-೦೭೩೩೫/೦೭೩೩೬, ಬೆಳಗಾವಿ-ಹೊಸಪೇಟೆ-ಹೈದರಾಬಾದ್-ಭದ್ರಾಚಲಂ ರೈಲು ಪುನಃರಾರಂಭ:- ಕಳೆದ ೩ ವರ್ಷಗಳಿಂದ ಸಂಚರಿಸುತ್ತಿದ್ದ ಈ ರೈಲನ್ನು ಕಳೆದ ೨ ತಿಂಗಳಿದ ರದ್ದುಪಡಿಸಿರುವುದರಿಂದ ಉತ್ತರ ಕರ್ನಾಟಕದ ಜಿಲ್ಲೆಗಳಿಂದ ಹೈದರಾಬಾದ್ ಮತ್ತು ತೆಲಂಗಾಣದ ಕಡೆಗೆ ಹೋಗುವ ಪ್ರಯಾಣಿಕರಿಗೆ ತೊಂದರೆಯಾಗಿದೆ. ವಿಶೇಷವಾಗಿ ಬೆಳಗಾವಿ, ಹುಬ್ಬಳ್ಳಿ, ಗದಗ್, ಕೊಪ್ಪಳ, ವಿಜಯನಗರ, ಬಳ್ಳಾರಿ ಜಿಲ್ಲೆಗಳಿಂದ ಪ್ರಸಿದ್ದ ಯಾತ್ರಾಸ್ಥಳ ಮಂತ್ರಾಲಯಕ್ಕೆ ಹೋಗುವ ಪ್ರಯಾಣಿಕರಿಗೆ ರೈಲು ಸಂಪರ್ಕ ಇಲ್ಲದಂತಾಗಿದೆ. ಈ ರೈಲು ಅತ್ಯಂತ ಅಗತ್ಯವಾಗಿದ್ದು, ಕೂಡಲೇ ಸದರಿ ರೈಲನ್ನು ಪುನರ್ ಆರಂಭಿಸಿ ಖಾಯಂ ಆಗಿ ಸಂಚರಿಸುವತೆ ಆಗ್ರಹ ಪಡಿಸಿದ್ದಾರೆ. ೨)ಬೆಂಗಳೂರು-ಹೊಸಪೇಟೆ ನಡುವೆ ಒಂದೇಭಾರತ್ ರೈಲು ಆರಂಭ:- ವಿಶ್ವಪಾರಂಪರಿಕ ತಾಣ ಹಂಪಿ ಹಾಗೂ ಹಲವು ವರ್ಷಗಳಿಂದ ಪ್ರವರ್ಧಮಾನಕ್ಕೆ ಬರುತ್ತಿರುವ ಆಂಜನೇಯನ ಜನ್ಮಸ್ಥಳವಾದ ಅಂಜನಾದ್ರಿಗೆ ರಾಜ್ಯ, ದೇಶ ವಿದೇಶಗಳಿಂದ ಪ್ರತಿನಿತ್ಯ, ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಆದುದರಿಂದ ಪ್ರವಾಸಿಗರ ಅನುಕೂಲಕ್ಕಾಗಿ ಈ ಎರಡು ನಗರಗಳ ನಡುವೆ ಒಂದೇ ಭಾರತ್ ರೈಲು ಆರಂಭಿಸಿದರೆ ಈ ಭಾಗದಲ್ಲಿ ಪ್ರವಾಸೋದ್ಯಮ ಹಾಗೂ ಆರ್ಥಿಕ ಚಟುವಟಿಕೆಗಳು ಬೆಳವಣಿಗೆಯಾಗುತ್ತವೆ.
೩)ಗಾಡಿ ಸಂಖ್ಯೆ. ೦೭೩೩೭/೦೭೩೩೮, ಹುಬ್ಬಳ್ಳಿ-ತೋರಣಗಲ್ಲು ಪ್ಯಾಸಿಂಜರ್ ರೈಲು ವಿಸ್ತರಿಸಿ :- ಈ ಹಿಂದೆ ಹುಬ್ಬಳ್ಳಿಯಿಂದ ಗುಂತಕಲ್ ನಡುವೆ ಸಂಚರಿಸುತ್ತಿದ್ದ ಈ ರೈಲು ಪ್ರಸ್ತುತ ತೋರಣಗಲ್ ವರೆಗೆ ಮಾತ್ರ ಸಂಚರಿಸುತ್ತಿದೆ. ಇದರಿಂದ ಪ್ರತಿನಿತ್ಯ ಈ ಭಾಗದಿಂದ ವೈದ್ಯಕೀಯ ಚಿಕಿತ್ಸೆ, ಶಾಲಾ ಕಾಲೇಜುಗಳು, ವ್ಯಾಪಾರ ವಹಿವಾಟಿಗೆ ಬಳ್ಳಾರಿಗೆ ಹೋಗುವ ಪ್ರಯಾಣಿಕರಿಗೆ ತೊಂದರೆಯಾಗಿದೆ, ಆದುದರಿಂದ ಈ ರೈಲನ್ನು ಮೊದಲಿನಂತೆ ಗುಂತಕಲ್ ವರೆಗೆ ವಿಸ್ತರಿಸುವ ಅಗತ್ಯವಿದೆ ಎಂದು ಬಾಬುಲಾಲ್ ಜೈನ್ ಅವರು ಮನವಿ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.