ಕಲಬುರಗಿ:- ತಾಲ್ಲೂಕಿನ ಸೀತನೂರಿನಲ್ಲಿ ಮಳೆಗಾಳಿಗೆ ಹಲವಾರು ರೈತರ ಜಮೀನುಗಳಲ್ಲಿನ ಬಾಳೆ ಬೆಳೆಯು ನೆಲಕ್ಕೆ ಕುಸಿದುಬಿದ್ದು ಅಪಾರ ಪ್ರಮಾಣದ ಹಾನಿಯಾಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.
ಗ್ರಾಮದ ಬಾಬುರಾವ್ ಪೋಲಿಸ್ ಪಾಟೀಲ್ ಅವರ ಸರ್ವೆ ನಂಬರ್ 140ರ ಜಮೀನಿನಲ್ಲಿ ನಾಲ್ಕು ಎಕರೆಯಲ್ಲಿ ಬೆಳೆದಿದ್ದ ನಾಲ್ಕು ಸಾವಿರ ಬಾಳೆ ಬೆಳೆ ಸಂಪೂರ್ಣ ನೆಲಕ್ಕೆ ಬಿದ್ದಿವೆ. ನಾಗಣ್ಣಗೌಡ ಪೋಲಿಸ್ ಪಾಟೀಲ್ ಅವರ ಸರ್ವೆ ನಂಬರ್ 142ರಲ್ಲಿನ ಮೂರು ಎಕರೆ ಜಮೀನಿನಲ್ಲಿ 2800 ಬಾಳೆ ಬೆಳೆಗಳು ನೆಲಕ್ಕೆ ಬಿದ್ದು ಸಂಪೂರ್ಣ ಹಾಳಾಗಿವೆ. ಬಸವರಾಜ್ ಭೀಮರಾಯ್ ಅಲಪುರ ಅವರ ಸರ್ವೆ ನಂಬರ್ 141ರಲ್ಲಿನ ಮೂರು ಎಕರೆಯಲ್ಲಿನ 2800 ಬಾಳೆ ಬೆಳೆಗಳು ನೆಲಕ್ಕೆ ಉರುಳಿದೆ.
ತಲಾಟಿ ಹೊಲಗಳಿಗೆ ಭೇಟಿ ನೀಡಿ ಪಂಚನಾಮೆ ಮಾಡಿಕೊಂಡು ಹೋಗಿದ್ದಾರೆ. ಗುರುವಾರ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಗ್ರಾಮದ ಹೊಲಗಳಿಗೆ ಭೇಟಿ ನೀಡಿ ಬಾಳೆ ಬೆಳೆ ಹಾನಿಯಾದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದರು. ಸರ್ಕಾರದಿಂದ ಪರಿಹಾರ ಕೊಡಿಸುವುದಾಗಿ ಅವರು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಬಾಬುಗೌಡ ಪೋಲಿಸ್ ಪಾಟೀಲ್, ಪವನಕುಮಾರ್ ಬಿ. ವಳಕೇರಿ, ನಾಗಣ್ಣಗೌಡ, ಸಾಹೇಬ್ ಪಟೇಲ್, ಸೈದು ಕಣ್ಣೂರ್, ಸಿದ್ದಣಗೌಡ, ಶಂಕರಗೌಡ ಮುಂತಾದವರು ಉಪಸ್ಥಿತರಿದ್ದರು.