ಬೆಂಗಳೂರು: ಎಚ್ಎಂಟಿಗೆ ಅರಣ್ಯ ಭೂಮಿ ಅಕ್ರಮ ಪರಭಾರೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ 7 ದಿನಗಳೊಳಗೆ ವಿವರ ನೀಡುವಂತೆ ಎಪಿಸಿಸಿಎಫ್ ವೆಂಕಟಸುಬ್ಬಯ್ಯ ಮತ್ತು ಇತರ ವಿಭಾಗೀಯ ಅರಣ್ಯ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಬಿ ಖಂಡ್ರೆ ಅವರು ಬುಧವಾರ ಹೇಳಿದರು.
ಈ ಕುರಿತು ಅರಣ್ಯಾಧಿಕಾರಿಗಳಿಗೆ ಹಾಗೂ ಮುಖ್ಯ ಕಾರ್ಯದರ್ಶಿಗಳಿಗೂ ಪತ್ರ ಬರೆದಿರುವ ಸಚಿವರು, ಕರ್ನಾಟಕ ಅರಣ್ಯ ಕೈಪಿಡಿಯಲ್ಲಿ ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್ 17ರಡಿಯಲ್ಲಿ ಮೀಸಲು ಅರಣ್ಯ ಎಂದು ಅಧಿಸೂಚನೆಯಾದ ಬಳಿಕ, ಆ ಅರಣ್ಯವನ್ನು ‘ಯಾವತ್ತೂ ಅರಣ್ಯವಲ್ಲ’ ಎಂದು ಘೋಷಿಸಬೇಕಾದರೆ ವಿಧಾನಮಂಡಲದ ಉಭಯ ಸದನಗಳಲ್ಲಿ ನಿರ್ಣಯ ಆಗಬೇಕು ಎಂದು ಸ್ಪಷ್ಟವಾಗಿದೆ.
ಅಲ್ಲದೆ, ಕರ್ನಾಟಕ ಸರ್ಕಾರದ ಕಾರ್ಯ ಕಲಾಪಗಳ ನಿರ್ವಹಣಾ ನಿಯಮಾವಳಿ 1977ರಲ್ಲಿ ಕೂಡಾ ಯಾವುದೇ ಇತರ ಸರ್ಕಾರಿ ಇಲಾಖೆಗೆ ಸರ್ಕಾರಿ ಭೂಮಿ ವರ್ಗಾವಣೆ ಮಾಡಬೇಕಾದ ಸಂದರ್ಭದಲ್ಲಿ ಅದರ ಮೌಲ್ಯ ರೂ.5ಕೋಟಿಗಿಂತ ಹೆಚ್ಚಾಗಿದ್ದಲ್ಲಿ, ಸಚಿವ ಸಂಪುಟದ ಪೂರ್ವಾನುಮತಿ ಪಡೆಯಬೇಕು ಎಂದು ತಿಳಿಸಲಾಗಿದೆ. ಆದರೆ, ಕೆಲವು ಅಧಿಕಾರಿಗಳು ಸಚಿವರ ಗಮನಕ್ಕೂ ತಾರದೆ, ಸಚಿವ ಸಂಪುಟದ ಅನುಮತಿಯೂ ಇಲ್ಲದೆ ತಮ್ಮ ಮಟ್ಟದಲ್ಲೇ ಸರ್ಕಾರದ ಆದೇಶ ಮಾಡಿ ಸುಪ್ರೀಂಕೋರ್ಟ್ಗೆ ಮಧ್ಯಂತರ ಅರ್ಜಿ ಸಲ್ಲಿಸಿರುವುದು ಅನುಮಾನ ಹುಟ್ಟಿಸುತ್ತಿದೆ.ಎಚ್‌ಎಂಟಿ ಸಂಸ್ಥೆಯು ಈ ಅರಣ್ಯ ಭೂಮಿಯನ್ನು ಸರ್ಕಾರಿ ಮತ್ತು ಖಾಸಗಿಯವರಿಗೆ ಪರಭಾರೆ ಮಾಡಲು ನಿರಾಕ್ಷೇಪಣಾ ಪತ್ರವನ್ನೂ ಇಲಾಖೆ ನೀಡಿದೆ. ಇದರಿಂದಾಗಿ ಎಚ್‌ಎಂಟಿ ಸಂಸ್ಥೆ ಈವರೆಗೆ 165 ಎಕರೆ ಜಮೀನನ್ನು, ರೂ.313.65 ಕೋಟಿಗೆ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳಿಗೆ ಮಾರಾಟ ಮಾಡಿದೆ.
2015ರಲ್ಲಿ ಅಂದಿನ ಎಪಿಸಿಸಿಎಫ್ ವೆಂಕಟಸುಬ್ಬಯ್ಯ ಅವರು ಎಚ್‌ಎಂಟಿ ಪ್ರದೇಶದ ಅರಣ್ಯ ಭೂಮಿ ತೆರವಿಗೆ 64 ಎ ಪ್ರಕ್ರಿಯೆ ನಡೆಸಿ ಆದೇಶ ನೀಡಿರುತ್ತಾರೆ. ಈ ಆದೇಶದ ವಿರುದ್ಧ ಎಚ್‌ಎಂಟಿ. ನಿಗದಿತ ಕಾಲಮಿತಿಯಲ್ಲಿ ಮೇಲ್ಮನವಿಯನ್ನೂ ಸಲ್ಲಿಸಿಲ್ಲ. ಹೀಗಾಗಿ ಇದು ಅರಣ್ಯ ಇಲಾಖೆಯ ಸ್ವತ್ತಾಗಿರುತ್ತದೆ. ವಸ್ತುಸ್ಥಿತಿ ಹೀಗಿರುವಾಗ, ಕೆಲವು ಹಿರಿಯ ಅರಣ್ಯಾಧಿಕಾರಿಗಳು, ಅಂದಿನ ಅರಣ್ಯ ಸಚಿವರಿಂದ ಲಿಖಿತ ಅನುಮತಿ ಪಡೆಯದೆ, ಸಚಿವ ಸಂಪುಟದ ಅನುಮೋದನೆ ಪಡೆಯದೆ ಎಚ್‌ಎಂಟಿ ಪ್ರದೇಶದ ಅರಣ್ಯ ಭೂಮಿಯನ್ನು ಡಿನೋಟಿಫೈ ಮಾಡಲು ತರಾತುರಿಯಲ್ಲಿ ಸರ್ಕಾರಿ ಆದೇಶ ಮಾಡಿಸಿ, ಸುಪ್ರೀಂಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿರುವುದೂ ಅನುಮಾನಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.
ಸದ್ಯ ಎಲ್ಲ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಖಂಡ್ರೆ ಸೂಚನೆ ನೀಡಿದ್ದಾರೆ. ಅಲ್ಲದೆ, 7 ದಿನಗಳ ಒಳಗಾಗಿ ಉತ್ತರ ಪಡೆದು, ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದಾರೆ.