ಟಿವಿ ೨೩ ಕನ್ನಡ
ಬೆಂಗಳೂರು: ಲೋಕಸಭೆ ಚುನಾವಣೆ ಬಳಿಕ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಅಧ್ಯಕ್ಷರನ್ನು ಬದಲಾವಣೆ ಮಾಡಲಾಗುತ್ತದೆ ಎಂಬ ವರದಿಗಳ ಬೆನ್ನಲ್ಲೇ ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ಸಹಕಾರ ಸಚಿವ ಕೆಎನ್ ರಾಜಣ್ಣ ಅವರು ಶನಿವಾರ ಹೇಳಿದ್ದಾರೆ.
ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಣ್ಣ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ, ನಾನು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂದು ಹೇಳಿದರು.
ಅಧ್ಯಕ್ಷರ ಬದಲಾವಣೆ ಸನ್ನಿವೇಶ ಎದುರಾದರೆ ನಾನು ಅಧ್ಯಕ್ಷನಾಗಲು ಸಿದ್ಧನಿದ್ದೇನೆ. ಅಧ್ಯಕ್ಷ ಸ್ಥಾನ ಸಿಕ್ಕರೆ ಮಂತ್ರಿ ಸ್ಥಾನ ಬಿಡಲು ನಾನು ತಯಾರಿದ್ದೇನೆ. ನಾನು ಮುಂದೆ ಯಾವುದೆ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ. ಅಧ್ಯಕ್ಷ ಸ್ಥಾನ ಸಿಕ್ಕರೆ ಪಕ್ಷಕ್ಕಾಗಿ ತನು, ಮನ ಅರ್ಪಿಸುತ್ತೇನೆ ಎಂದು ಹೇಳಿದರು.ರಾಜ್ಯ ಸರ್ಕಾರಕ್ಕೆ ಒಂದು ವರ್ಷ ಪೂರ್ಣವಾಗಿದೆ. ಐದು ವರ್ಷ ಪೂರ್ಣ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ, ಡಿಕೆ ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಇರುತ್ತಾರೆ ಅಂತ ವೇಣುಗೋಪಾಲ್ ಹೇಳಿದ್ದರು. ಆದರೆ ಚುನಾವಣೆ ಫಲಿತಾಂಶ ಬರಲಿ ಆಮೇಲೆ ಧ್ರುವೀಕರಣ ಆಗಬಹುದು. ಇಲ್ಲಿ ಮಾತ್ರವಲ್ಲ ಎಲ್ಲ ಕಡೆಯೂ ಆಗಬಹುದು ಎಂದು ಸಚಿವರು ತಿಳಿಸಿದ್ದಾರೆ.
ಇದೇ ವೇಳೆ ಡ್ರಗ್ಸ್ ಕುರಿತು ಮಾತನಾಡಿದ ರಾಜಣ್ಣ, ಬೆಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾ ಹೆಚ್ಚುತ್ತಲೇ ಇದೆ. ಮಾದಕ ವಸ್ತು ನಿಗ್ರಹ ದಳ ಹೆಚ್ಚು ಕಾರ್ಯೋನ್ಮುಕವಾಗಬೇಕು ಎಂದರು.