ಪುಣೆ ಪೋರ್ಶೆ ಕಾರು ಅಪಘಾತ: ಚಾಲಕನನ್ನು ಕೂಡಿ ಹಾಕಿದ್ದ ಆರೋಪಿ ಬಾಲಕನ ಅಜ್ಜನ ಬಂಧನ

ಪುಣೆ ಪೋರ್ಶೆ ಕಾರು ಅಪಘಾತ: ಚಾಲಕನನ್ನು ಕೂಡಿ ಹಾಕಿದ್ದ ಆರೋಪಿ ಬಾಲಕನ ಅಜ್ಜನ ಬಂಧನ

Share

ಟಿವಿ ೨೩ ಕನ್ನಡ

ಪುಣೆ: ಪುಣೆಯಲ್ಲಿ ಐಷಾರಾಮಿ ಕಾರು ಪೋರ್ಷೆ ಚಲಾಯಿಸಿ ಇಬ್ಬರನ್ನು ಬಲಿ ಪಡೆದ 17 ವರ್ಷದ ಬಾಲಕನ ಅಜ್ಜನನ್ನು ಅವರ ಕುಟುಂಬದ ಚಾಲಕನನ್ನು ಅಕ್ರಮವಾಗಿ ಮನೆಯಲ್ಲಿ ಕೂಡಿ ಹಾಕಿದ್ದಕ್ಕಾಗಿ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಕುಟುಂಬದ ಚಾಲಕನನ್ನು ಅಕ್ರಮವಾಗಿ ಬಂಧನದಲ್ಲಿ ಇರಿಸಿಕೊಂಡು, ಅಪಘಾತದ ಹೊಣೆ ಹೊತ್ತುಕೊಳ್ಳುವಂತೆ ಆತನಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಬಾಲಕನ ಅಜ್ಜ ಸುರೇಂದ್ರ ಕುಮಾರ್ ಅಗರವಾಲ್ ಅವರನ್ನು ಬಂಧಿಸಲಾಗಿದೆ. ಅಜ್ಜನ ವಿರುದ್ಧ ಪೊಲೀಸರು ಅಪಹರಣ ಮತ್ತು ಅಕ್ರಮ ಬಂಧನದ ಆರೋಪದಲ್ಲಿ ಐಪಿಸಿ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ಪ್ರಕರಣದಲ್ಲಿ ಬಾಲಕನ ತಂದೆ ವಿಶಾಲ್ ಅಗರ್ವಾಲ್ ಅವರ ಹೆಸರೂ ಇದೆ ಎಂದು ಅಧಿಕಾರಿ ತಿಳಿಸಿದ್ದಾರೆ.ಒಂದು ದಿನದ ಹಿಂದೆ, ಪುಣೆ ಪೊಲೀಸ್ ಮುಖ್ಯಸ್ಥ ಅಮಿತೇಶ್ ಕುಮಾರ್ ಅವರು ಅತ್ಯಾಧುನಿಕ ಐಷಾರಾಮಿ ಕಾರನ್ನು ಅಪ್ರಾಪ್ತ ಬಾಲಕ ಓಡಿಸಿಲ್ಲ ಎಂದು ಸಾಬೀತು ಮಾಡಲು ಪ್ರಯತ್ನಿಸಲಾಗಿದೆ ಎಂದು ಹೇಳಿದ್ದರು.

ಬಾಲಾಪರಾಧಿಯ ಕುಟುಂಬದ ಚಾಲಕನ ದೂರಿನ ಮೇರೆಗೆ, ಯರವಾಡ ಪೊಲೀಸರು ಬಾಲಕನ ಅಜ್ಜ ಮತ್ತು ಆತನ ತಂದೆಯ ವಿರುದ್ಧ ಐಪಿಸಿ ಸೆಕ್ಷನ್ 365 ಮತ್ತು 368 ಅಡಿಯಲ್ಲಿ ಪ್ರತ್ಯೇಕ ಅಪರಾಧವನ್ನು ದಾಖಲಿಸಿದ್ದಾರೆ. ಅವರು ತಿಳಿಸಿದ್ದಾರೆ.

ಬಾಲಕನ ಅಜ್ಜ ಮತ್ತು ತಂದೆ ಇಬ್ಬರೂ ಚಾಲಕನ ಫೋನ್ ಕಿತ್ತುಕೊಂಡಿದ್ದರು. ತಮ್ಮ ಬಂಗಲೆ ಆವರಣದಲ್ಲಿ ಇರುವ ಆತನ ಮನೆಯಲ್ಲಿ ಮೇ 19 ಮತ್ತು 20ರಂದು ಆತನನ್ನು ಕೂಡಿ ಹಾಕಿದ್ದರು. ಚಾಲಕನನ್ನು ಆತನ ಪತ್ನಿ ಬಂಧ ಮುಕ್ತಗೊಳಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ಭಾನುವಾರ ಕಲ್ಯಾಣಿನಗರ ಪ್ರದೇಶದಲ್ಲಿ ಬಾರ್‌ನಲ್ಲಿ ಮದ್ಯ ಸೇವಿಸಿ ಪಾನಮತ್ತರಾಗಿದ್ದ 17 ವರ್ಷದ ಬಾಲಕ ಚಾಲನೆ ಮಾಡುತ್ತಿದ್ದ ಪೋರ್ಶೆ ಕಾರು, ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಇಬ್ಬರು ಸಾಫ್ಟ್‌ವೇರ್ ಇಂಜಿನಿಯರ್‌ಗಳು ಮೃತಪಟ್ಟಿದ್ದಾರೆ.


Share