ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿತ: ರಾಜ್ಯಪಾಲರು ಕೂಡಲೇ ಮಧ್ಯಪ್ರವೇಶಿಸಬೇಕು- ಬಿ. ವೈ. ವಿಜಯೇಂದ್ರ ಆಗ್ರಹ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿತ: ರಾಜ್ಯಪಾಲರು ಕೂಡಲೇ ಮಧ್ಯಪ್ರವೇಶಿಸಬೇಕು- ಬಿ. ವೈ. ವಿಜಯೇಂದ್ರ ಆಗ್ರಹ.

Share

ಬೆಂಗಳೂರು: ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಕಸ್ಟಡಿಯಲ್ಲಿದ್ದ ವ್ಯಕ್ತಿ ಸಾವಿನ ನಂತರ ಪೊಲೀಸ್ ಸಿಬ್ಬಂದಿ ಮೇಲೆ ನಡೆದ ಹಿಂಸಾಚಾರ ಮತ್ತು ಹಲ್ಲೆಗೆ ರಾಜ್ಯ ಕಾಂಗ್ರೆಸ್ ಪಕ್ಷವೇ ಹೊಣೆ ಎಂದಿರುವ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಮುಸ್ಲಿಂ ವೋಟ್ ಬ್ಯಾಂಕ್ ಓಲೈಕೆ ರಾಜ್ಯವನ್ನು ಅರಾಜಕತೆಯತ್ತ ಕೊಂಡೊಯ್ಯುತ್ತಿದೆ ಎಂದು ಶನಿವಾರ ಆರೋಪಿಸಿದ್ದಾರೆ.

ರಾಜ್ಯಪಾಲರು ಈ ಕೂಡಲೇ ಮಧ್ಯ ಪ್ರವೇಶಿಸಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಸರ್ಕಾರದಿಂದ ವರದಿ ಪಡೆಯಲಿ. ಅಂತೆಯೇ ಪೊಲೀಸ್ ಠಾಣೆಗಳಿಗೆ ದಾಳಿ ಮಾಡುತ್ತಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆ ಸರಿ ದಾರಿಗೆ ಬರಲು ರಾಜ್ಯಪಾಲರು ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದಾರೆ.

“ಪೊಲೀಸರು ಪಕ್ಷಪಾತವಿಲ್ಲದೆ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದ ಪರಿಸ್ಥಿತಿ ಇದೆ. ಇದರಿಂದಾಗಿ ರಾಜ್ಯವು ಭಯೋತ್ಪಾದಕರ ಸುರಕ್ಷಿತ ತಾಣವಾಗಿ ಮಾರ್ಪಟ್ಟಿದೆ. ಮಾಫಿಯಾ ಮತ್ತು ರೌಡಿಗಳ ಪ್ರಾಬಲ್ಯ ಮಿತಿ ಮೀರಿದ್ದು, ತಪಾಸಣೆಯಿಲ್ಲದೆ ರೇವ್ ಪಾರ್ಟಿಗಳನ್ನು ಆಯೋಜಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಬಿಹಾರದಲ್ಲಿ ಲಲ್ಲುಪ್ರಸಾದ್ ಯಾದವ್ ಆಡಳಿತ ನಡೆಸಿದ ದಿನಗಳು ಕರ್ನಾಟಕದಲ್ಲಿ ಮತ್ತೆ ತಲೆ ಎತ್ತುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ‘ಸರ್ವ ಜನಾಂಗದ ಶಾಂತಿಯ ತೋಟ’ಎಂದು ಕರೆದ ಕುವೆಂಪು ಕಲ್ಪನೆಯನ್ನು ಕೊಲ್ಲಲು ಹೊರಟಿರುವ ಕಾಂಗ್ರೆಸ್ ಸರ್ಕಾರ ಕರುನಾಡನ್ನು ಅಭದ್ರತೆಯ ಅಶಾಂತಿಯ ಕೊಂಪೆ ಮಾಡಲು ಹೊರಟಿದೆ. ಪೊಲೀಸರ ನೈತಿಕ ಶಕ್ತಿ ಸಂಪೂರ್ಣವಾಗಿ ಕುಗ್ಗಿಸುವ ವ್ಯವಸ್ಥೆಯ ಜಾಲ ಕೆಲಸ ಮಾಡುತ್ತಿದೆ ಎಂದಿದ್ದಾರೆ.

ಪೊಲೀಸರು ಹಾಗೂ ಪೊಲೀಸ್ ಠಾಣೆಗಳೇ ರಕ್ಷಣೆಗೆ ಮೋರೆ ಇಡುವ ಪರಿಸ್ಥಿತಿ ಇರುವಾಗ ರಕ್ಷಣೆಗಾಗಿ ಜನರು ಯಾರ ಮೊರೆ ಹೋಗಬೇಕು ಎನ್ನುವುದು ತಿಳಿಯದಾಗಿದೆ. ‘ಬೇಲಿಯೇ ಎದ್ದು ಹೊಲ ಮೇಯ್ದಂತೆ’ ಪೊಲೀಸ್ ಬೇಲಿಯನ್ನೇ ಅಸ್ಥಿರಗೊಳಿಸಲು ಹೊರಟಿರುವ ಕಾಂಗ್ರೆಸ್ ಸರ್ಕಾರ ಮೂಲಭೂತವಾದಿ ಅಲ್ಪಸಂಖ್ಯಾತರಿಗಾಗಿಯೇ ನಾವು ಆಡಳಿತ ನಡೆಸುವುದು, ಅವರ ಪರವಾಗಿ ನಿಲ್ಲುವುದು ಹಾಗೂ ಅವರ ಚಟುವಟಿಕೆಗಳಿಗೆ ಮುಕ್ತ ಸ್ವಾತಂತ್ರ್ಯ ಕಲ್ಪಿಸುವುದೇ ತಮ್ಮ ಧ್ಯೇಯ ಎಂದು ಘೋಷಿಸಿಬಿಡಲಿ, ಆಗ ಈ ಸರ್ಕಾರವನ್ನು ನೆಚ್ಚಿಕೊಳ್ಳದೇ ಜನ ಸ್ವಯಂ ರಕ್ಷಣೆ ಮಾಡಿಕೊಳ್ಳುತ್ತಾರೆ. ರಾಜ್ಯದ ಸದ್ಯದ ಬೆಳವಣಿಗೆಗಳು ಜನತೆಯ ಆತಂಕವನ್ನು ದಿನದಿಂದ ದಿನಕ್ಕೆ ಹೆಚ್ಚಿಸುತ್ತಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.


Share