ಬೆಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು(ಡಿಎಸ್‌ಇಎಲ್) ರಾಜ್ಯದಲ್ಲಿನ ಅಧಿಕೃತ ಅನುದಾನ ರಹಿತ ಶಾಲೆಗಳ ದೀರ್ಘ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ಇಲಾಖೆಯ ಅನುಮತಿ ಪಡೆಯದ ಶಾಲೆಗಳ ಪಟ್ಟಿಯನ್ನು ನೀಡದಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಶಿಕ್ಷಣ ಇಲಾಖೆ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ತಮ್ಮ ಮಕ್ಕಳ ಶಾಲೆಗಳ ಹೆಸರನ್ನು ಪತ್ತೆಹಚ್ಚಲು ಅನೇಕ ಪೋಷಕರು ಕಷ್ಟಪಡುತ್ತಿದ್ದಾರೆ. ಏಕೆಂದರೆ BEO ಗಳು ಅಪ್‌ಲೋಡ್ ಮಾಡಿದ ಕೆಲವು ಪಟ್ಟಿಗಳು PDF ಸ್ವರೂಪದಲ್ಲಿರುವ ಫೋಟೋಗಳಾಗಿದ್ದು, ಅವುಗಳಲ್ಲಿ ಹಲವು ಮಸುಕಾಗಿವೆ. ಪಟ್ಟಿಯಲ್ಲಿ ಹುಡುಕಾಟ ಆಯ್ಕೆಯ ಕೊರತೆಯಿಂದಾಗಿ ಪೋಷಕರು ಮತ್ತು ವಿದ್ಯಾರ್ಥಿಗಳು ತಮ್ಮ ಹೆಸರನ್ನು ಹುಡುಕಲು ನೂರಾರು ಹೆಸರುಗಳನ್ನು ಓದುತ್ತಿದ್ದಾರೆ.
ಮುಂದಿನ ವಾರದಲ್ಲಿ ಅನಧಿಕೃತ ಶಾಲೆಗಳ ಪಟ್ಟಿಯನ್ನು ಬಿಡುಗಡೆ ಮಾಡದಿದ್ದರೆ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್ಸ್(ಕೆಎಎಂಎಸ್) ಎಚ್ಚರಿಕೆ ನೀಡಿದೆ.ಈ ಸಂಬಂಧ ಶಿಕ್ಷಣ ಇಲಾಖೆ ಆಯುಕ್ತ ಬಿ.ಬಿ.ಕಾವೇರಿ ಅವರಿಗೆ ಪತ್ರ ಬರೆದಿರುವ ಅಸೋಸಿಯೇಷನ್, ‘ಕೆಎಎಂಎಸ್ ಹಲವು ಅನಧಿಕೃತ ಶಾಲೆಗಳನ್ನು ಗುರುತಿಸಿದ್ದು, ಶೈಕ್ಷಣಿಕ ವರ್ಷ ಪ್ರಾರಂಭವಾಗುವ ಮೊದಲು ಅವುಗಳ ಹೆಸರುಗಳನ್ನು ಬಹಿರಂಗಪಡಿಸುವಂತೆ ಇಲಾಖೆಗೆ ಮನವಿ ಮಾಡಿದೆ. ಆದರೆ, ಇಲಾಖೆಯು ಅಧಿಕೃತ ಶಾಲೆಗಳ ಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಿದೆ. ಇದು ಪಾಲಕರು ಮತ್ತು ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಸಿದೆ.
ಬಿಇಒ ಮತ್ತು ಡಿಡಿಪಿಐಗಳು ಅನಧಿಕೃತ ಶಾಲೆಗಳ ಹೆಸರನ್ನು ಪಟ್ಟಿ ಮಾಡಿ ಕೇಂದ್ರ ಕಚೇರಿಗೆ ಸಲ್ಲಿಸಲು ವಿಫಲರಾಗಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.
ಶಿಕ್ಷಣ ಇಲಾಖೆ ಅನಧಿಕೃತ ಶಾಲೆಗಳ ಪಟ್ಟಿ ಬಿಡುಗಡೆ ಮಾಡುವ ಬದಲಿಗೆ ಅಧಿಕೃತ ಶಾಲೆಗಳ ಪಟ್ಟಿ ಬಿಡುಗಡೆ ಮಾಡಿ ಅಪಹಾಸ್ಯಕ್ಕೆ ಗುರಿಯಾಗಿದೆ. ಅನಧಿಕೃತ ಶಾಲೆಗಳ ಯಾವುದು ಎಂದು ಮಕ್ಕಳ ಪೋಷಕರು ಮತ್ತು ಪಾಲಕರೇ ತಾವೇ ಸ್ವತಃ ಹುಡಿಕಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಅನಧಿಕೃತ ಶಾಲೆಗಳ ಪಟ್ಟಿಯನ್ನು ಪ್ರಕಟಿಸದಿರುವುದು ಶಿಕ್ಷಣ ಇಲಾಖೆಯ ವೈಫಲ್ಯ ಎಂಬ ಟೀಕೆಗೆ ಗುರಿಯಾಗಿದೆ. ಅನಧಿಕೃತ ಶಾಲೆಗಳನ್ನು ಇಲಾಖೆಯ ಅಧಿಕಾರಿಗಳು ಪತ್ತೆ ಹಚ್ಚಿಲ್ಲ ಏಕೆ ಎಂಬ ಪ್ರಶ್ನೆಗಳು ಉದ್ಬವಿಸಿವೆ.