ಬಂಗಾರಪೇಟೆ: ತಾಲ್ಲೂಕಿನ ಬೂದಿಕೋಟೆ ಹೋಬಳಿ ಕೇಂದ್ರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ಮತ್ತು ಪುತ್ತಳಿಯನ್ನು ನಿರ್ಮಾಣ ಮಾಡಬೇಕೆಂದು ದಲಿತಪರ ಸಂಘಟನೆಗಳ ಒಕ್ಕೂಟ ಗ್ರಾಮ ಪಂಚಾಯಿತಿ ಅಧ್ಯಕ್ಷರು-ಪಿಡಿಓ ಹಾಗೂ ತಹಸೀಲ್ದಾರ್ ಅವರಿಗೆ ಮನವಿ ಪತ್ರ ನೀಡಲಾಯಿತು.
ಈ ವೇಳೆ ಕರ್ನಾಟಕ ದಲಿತ ರೈತಸೇನೆ ಸಂಸ್ಥಾಪಕ ಅಧ್ಯಕ್ಷ ಹುಣಸನಹಳ್ಳಿ ವೆಂಕಟೇಶ್ ಮಾತನಾಡಿ, ಬೂದಿಕೋಟೆ ಹೋಬಳಿಯಲ್ಲಿ ಸುಮಾರು ೪೦ಸಾವಿರ ಪರಿಶಿಷ್ಟ ಜಾತಿ ಜನಾಂಗದವರು ವಾಸವಾಗಿದ್ದು, ಇಲ್ಲಿನ ದಲಿತರಿಗೆ ಸಮುದಾಯ ಭವನ ಹಾಗೂ ಗ್ರಂಥಾಲಯ ಇಲ್ಲದೆ ಇರುವುದು ಖಂಡನೀಯ. ಬೂದಿಕೋಟೆ ಸರ್ವೆನಂ.೧೨೬ರಲ್ಲಿ ತಹಸೀಲ್ದಾರ್ ಅವರ ಹೆಸರಿಗೆ ೨ಎಕರೆ ಜಮೀನಿದ್ದು, ಈ ಜಮೀನನ್ನು ಅಂಬೇಡ್ಕರ್ ಸಮುದಾಯ ಭವನ, ಗ್ರಂಥಾಲಯಕ್ಕೆ ಮೀಸಲಿರಿಸಿ ಅನುಕೂಲ ಮಾಡಿಕೊಡಬೇಕು, ಇಲ್ಲವಾದಲ್ಲಿ ಬೂದಿಕೋಟೆ ಹೋಬಳಿ ಬಂದ್ ಮಾಡಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು.ದಸಂಸ-ಕರ್ನಾಟಕ ಸಂಘಟನೆಯ ಹಿರೇಕರಪನಹಳ್ಳಿ ರಾಮಣ್ಣ ಅವರು ಮಾತನಾಡಿ, ಹೋಬಳಿಯಲ್ಲಿ ಹೆಚ್ಚಿಗೆ ದಲಿತ ಜನಾಂಗದವರು ವಾಸವಾಗಿದ್ದು, ಅವರ ಒಳಿತಿಗಾಗಿ ಸಬಲೀಕರಣಕ್ಕಾಗಿ ಸಭೆ, ಸಮಾರಂಭಗಳು ನಡೆಸಲು ಹೋಬಳಿ ಕೇಂದ್ರದಲ್ಲಿ ಯಾವುದೇ ರೀತಿ ಅನುಕೂಲವಿರುವುದಿಲ್ಲ. ಆಗಾಗಿ ಈ ಭಾಗದಲ್ಲಿ ದಲಿತರ ಏಳ್ಗೆಗಾಗಿ ಶ್ರಮಿಸುವ ನಿಟ್ಟಿನಲ್ಲಿ ಸಮುದಾಯ ಭವನವನ್ನು ನಿರ್ಮಿಸಿ, ಸಂತೇ ಮೈದಾನದ ಬಳಿ ಅಂಬೇಡ್ಕರ್‌ರವರ ಪುತ್ತಳಿಯನ್ನು ನಿರ್ಮಾಣ ಮಾಡಬೇಕೆಂದು ದಲಿತ ಸಂಘಟನೆಗಳ ಒಕ್ಕೂಟದ ಪರವಾಗಿ ಒತ್ತಾಯಿಸುತ್ತೇನೆಂದರು.
ಈ ಸಂದರ್ಭದಲ್ಲಿ ಜೀವಿಕ ಡಾ.ರಾಮಚಂದ್ರಪ್ಪ, ಕಾಲೋನಿ ಶ್ರೀನಿವಾಸ್, ರಮೇಶ್, ಕೊಂಡನಹಳ್ಳಿ ರವಿ, ಹಿರೇಕರಪನಹಳ್ಳಿ ಮುನಿರಾಜು, ಮಾರುತಿ ಪ್ರಸಾದ್, ಕೀಲುಕೊಪ್ಪ ಮುನಿರಾಜು, ಸಂಗನಹಳ್ಳಿ ರಮೇಶ್, ಹುಳದೇನಹಳ್ಳಿ ವೆಂಕಟೇಶ್, ಹುಕ್ಕುಂದ ಮಂಜು, ಹಾಗೂ ಹಲವು ದಲಿತ ಗ್ರಾ.ಪಂ ಸದಸ್ಯರು ಭಾಗವಹಿಸಿದ್ದರು.
