ಚೆನ್ನಗಿರಿ ಪೊಲೀಸ್​ ಠಾಣೆಯಲ್ಲಿ ಆದಿಲ್ ಆರೋಗ್ಯದಲ್ಲಿ ಏರುಪೇರು ಆಗಿ ಮೃತಪಟ್ಟಿದ್ದಾನೆ; ಡಾ.ಜಿ.ಪರಮೇಶ್ವರ್

ಚೆನ್ನಗಿರಿ ಪೊಲೀಸ್​ ಠಾಣೆಯಲ್ಲಿ ಆದಿಲ್ ಆರೋಗ್ಯದಲ್ಲಿ ಏರುಪೇರು ಆಗಿ ಮೃತಪಟ್ಟಿದ್ದಾನೆ; ಡಾ.ಜಿ.ಪರಮೇಶ್ವರ್

Share

ಬೆಂಗಳೂರು: ​ದಾವಣಗೆರೆಯ ಚನ್ನಗಿರಿ ಪಟ್ಟಣದ ಆರೋಪಿ ಆದಿಲ್​​ ನನ್ನು ಪೊಲೀಸರು ಠಾಣೆಗೆ ಕರೆತಂದಿದ್ದರು. ಠಾಣೆಗೆ ಕರೆತಂದು 7 ನಿಮಿಷದೊಳಗೆ ಆರೋಗ್ಯದಲ್ಲಿ‌ ಏರುಪೇರು ಆಗಿ ಆದಿಲ್ ಮೃತಪಟ್ಟಿದ್ದಾನೆ ಹೊರತು ಲಾಕ್ ಅಪ್ ಡೆತ್ ಅಲ್ಲ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತನಿಧಿಗಳೊಂದಿಗೆ ಮಾತನಾಡಿದ ಅವರು, ಮರಣೋತ್ತರ ಪರೀಕ್ಷೆಯಲ್ಲಿ ಎಲ್ಲವೂ ಗೊತ್ತಾಗಲಿದೆ ಎಂದರು. ಉಡುಪಿಯಲ್ಲಿ ಎರಡು ಗುಂಪುಗಳ ನಡುವೆ ನಡೆದ ಗ್ಯಾಂಗ್​ವಾರ್​ ಘರ್ಷಣೆ ಹೇಳಿ ಕೇಳಿ ಆಗಲ್ಲ, ಇದ್ದಕ್ಕಿದ್ದಂತೆ ಮಾಡಿಕೊಳ್ಳುತ್ತಾರೆ. ಅಂತಹ ಸಂದರ್ಭದಲ್ಲಿ ನಾವು ಅವರನ್ನು ನಿಯಂತ್ರಿಸುತ್ತೇವೆ. ಠಾಣೆಗೆ ಬಂದು ತಲೆ ಕತ್ತರಿಸುತ್ತೇವೆ ಅಂದರೆ ಬಿಡಲು ಆಗುತ್ತಾ? ಡಿಜೆ ಹಳ್ಳಿ ಮತ್ತು ಕೆಜೆ ಹಳ್ಳಿ ರೀತಿ ಮಾಡುತ್ತೇವೆ ಅಂದಿದ್ದಾರೆ. ಅದು ನನ್ನ ಕಿವಿಗೆ ಬಿತ್ತು. ಕಾನೂನಿನಲ್ಲಿ ಏನು ಕ್ರಮ ಇದೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಬೆಳಗಾವಿ ಗಲ್ಲಿ ಕ್ರಿಕೆಟ್ ವಿಚಾರವಾಗಿ ನಡೆದ ಗಲಾಟೆಯಲ್ಲಿ, ಗಲ್ಲಿಯಲ್ಲಿ ಸಣ್ಣದಾಗಿ ಆದ ಗಲಾಟೆ ದೊಡ್ಡದಾಗಿ ಬೆಳೆಯುತ್ತದೆ. ಅದನ್ನು ನಿಯಂತ್ರಿಸುವುದು ನಮ್ಮ ಪೊಲೀಸರ ಕೆಲಸ. ಮೊದಲೇ ಗಲಾಟೆ ಮಾಡಿಕೊಳ್ಳುತ್ತಾರೆ ಎಂದು ಗೊತ್ತಾದರೆ ಅದು ಬೇರೆ ವಿಚಾರ. ಆ ರೀತಿ ಅನೇಕ ಸಂದರ್ಭಗಳಲ್ಲಿ ಆಗುವುದಿಲ್ಲ ಎಂದು ಹೇಳಿದರು.

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ವಿದೇಶಾಂಗ ಎಸ್​ ಜೈಶಂಕರ್​ ಅವರ ಹೇಳಿಕೆ ವಿಚಾರವಾಗಿ ಮಾತನಾಡಿ, ನಾನೂ ಕೂಡ ಜೈಶಂಕರ್​ ಅವರ ಹೇಳಿಕೆ ಗಮನಿಸಿದ್ದೇನೆ. ಮುಖ್ಯಮಂತ್ರಿಗಳು ಬರೆದ ಪತ್ರದ ಬಗ್ಗೆ ಪ್ರಧಾನಮಂತ್ರಿ ಕಚೇರಿ ವಿದೇಶಾಂಗ ಇಲಾಖೆಗೆ ತಿಳಿಸಿಲ್ಲ ಎಂಬುವುದು ಅವರ ಮಾತಿನ ಅರ್ಥ. ಮುಖ್ಯಮಂತ್ರಿಗಳು ಏಪ್ರಿಲ್​ನಲ್ಲೇ ಪತ್ರ ಬರೆದರು. ಪ್ರಧಾನಮಂತ್ರಿಗಳಿಗೆ ಬರೆದ ಪತ್ರ ಏನಾಯ್ತು? ಪ್ರಧಾನಿ ಕಚೇರಿಯಲ್ಲಿ ಆ ಪತ್ರಕ್ಕೆ ಯಾವುದೇ ಬೆಲೆ ಸಿಗಲಿಲ್ವಾ? ಅಥವಾ ಅವರ ಕಚೇರಿಯಿಂದ ವಿದೇಶಾಂಗ ಇಲಾಖೆಗೆ ತಿಳಿಸಿಲ್ವಾ ಕೇಂದ್ರ ಸರ್ಕಾರ ಯಾವ ರೀತಿ ಕೆಲಸ ಮಾಡುತ್ತದೆ ಎಂದು ಅಂತ ಇಲ್ಲೇ ಗೊತ್ತಾಗುತ್ತದೆ. ಪಾಸ್‌ಪೋರ್ಟ್ ರದ್ದಾದರೆ ಪ್ರಜ್ವಲ್ ವಿದೇಶದಲ್ಲಿ ಇರಲು ಆಗಲ್ಲ, ವಾಪಸ್ ಬರಲೇಬೇಕಾಗುತ್ತದೆ ಎಂದರು.


Share