ಉಳಿತಾಯ ಖಾತೆ ತೆರೆದರೆ ಸಾವಿರಗಟ್ಟಲೆ ಹಣ: Post Office ಮುಂದೆ ಮಹಿಳೆಯರ ಕ್ಯೂ, ಸಿಬ್ಬಂದಿಗಳಿಗೆ ತಲೆ ನೋವಾಗಿ ಪರಿಣಮಿಸಿದ ಹೆಂಗಳೆಯರು!

ಉಳಿತಾಯ ಖಾತೆ ತೆರೆದರೆ ಸಾವಿರಗಟ್ಟಲೆ ಹಣ: Post Office ಮುಂದೆ ಮಹಿಳೆಯರ ಕ್ಯೂ, ಸಿಬ್ಬಂದಿಗಳಿಗೆ ತಲೆ ನೋವಾಗಿ ಪರಿಣಮಿಸಿದ ಹೆಂಗಳೆಯರು!

Share

ಬೆಂಗಳೂರು: ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ತೆರೆದರೆ ಕೇಂದ್ರ ಸರ್ಕಾರದಿಂದ ಸಾವಿರಗಟ್ಟಲೆ ಹಣ ಸಿಗುತ್ತದೆ ಎಂಬ ವದಂತಿಯನ್ನು ನಂಬುತ್ತಿರುವ ಸಾವಿರಾರು ಮಹಿಳೆಯರು ಖಾತೆ ಮಾಡಿಸಲು ಪೋಸ್ಟ್‌ ಆಫೀಸಿಗೆ ದಾಂಗುಡಿ ಇಡುತ್ತಿದ್ದಾರೆ.

ಇದರಿಂದ ಪೋಸ್ಟ್‌ ಆಫೀಸ್‌ ಎದುರಿನಲ್ಲಿ ದಿನದಿಂದ ದಿನಕ್ಕೆ ಜನಜಂಗುಳಿ ಹೆಚ್ಚಾಗುತ್ತಿದ್ದು, ಕಚೇರಿ ಎದುರು ಜಮಾಯಿಸಿದ ಜನರನ್ನು ನಿಭಾಯಿಸುವುದು ಸಿಬ್ಬಂದಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಖಾತೆ ಮಾಡಿಸುವ ಸಲುವಾಗಿ ಹೆಂಗಳೆಯರು ಬೆಳಿಗ್ಗೆ 6 ಗಂಟೆಯಿಂದಲೇ ಅಂಚೆ ಕಚೇರಿ ಮುಂದೆ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದು, ಜನಸಂದಣಿಯನ್ನು ನಿಭಾಯಿಸಲು ಮಹಿಳಾ ಪೊಲೀಸರು ಮತ್ತು ಅಂಚೆ ಕಚೇರಿಯ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಬಾಯಿ ಮಾತು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್ ಗಳನ್ನು ನಂಬಿ ಖಾತಿ ಮಾಡಿಸಲು ಬಂದಿರುವುದಾಗಿ ಮಹಿಳೆಯರು ಹೇಳಿದ್ದಾರೆ.ರಾಜ್ಯದ ಗೃಹಲಕ್ಷ್ಮಿ ಯೋಜನೆಯ ಮಾದರಿಯಲ್ಲಿ ಕೇಂದ್ರ ಸರ್ಕಾರ ಕೂಡ ಯೋಜನೆ ತರುತ್ತಿದ್ದು, ಬಿಜೆಪಿ ಅಧಿಕಾರಕ್ಕೆ ಬಂದರೆ ರೂ 6,000 ಕೊಡುತ್ತದೆ ಎಂದು ಹಾಗೂ ಕಾಂಗ್ರೆಸ್ ಗೆದ್ದರೆ ರೂ 8,500 ನೀಡಲಾಗುವುದು ಎಂದು ವದಂತಿ ಹಬ್ಬಿಸಲಾಗಿದೆ.

ಶಕ್ತಿ ಯೋಜನೆ ಮಹಿಳೆಯರಿಗೆ ಸಹಾಯಕವಾಗಿದೆ. ಉಚಿತ ಬಸ್ ಪ್ರಯಾಣ ಬಳಸಿಕೊಂಡು ಮಹಿಳೆಯರು ತಮ್ಮ ಸ್ಥಳೀಯ ಅಂಚೆ ಕಚೇರಿಗಳಿಗೆ ಬದಲಾಗಿ ದೂರದ ಭಾಗಗಳಿಂದ ಮುಖ್ಯ ಅಂಚೆ ಕಚೇರಿಗೆ ಬರುತ್ತಿದ್ದಾರೆ ಎಂದು ಪೋಸ್ಟ್‌ಮ್ಯಾನ್ ಅಣ್ಣಪ್ಪ ಸ್ವಾಮಿ ಅವರು ಹೇಳಿದ್ದಾರೆ.

ಜುನೈದ್ ಖಾನ್ ಎಂಬುವವರು ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಮಾಸಿಕ 8,500 ರೂ.ಗಳನ್ನು ನೀಡುವುದಾಗಿ ಘೋಷಣೆ ಮಾಡಿದೆ ಎಂಬುದನ್ನು ಸಾಮಾಜಿಕ ಜಾಲತಾಣಗಳ ಮೂಲಕ ತಿಳಿದುಕೊಂಡಿದ್ದೇನೆ. ಹೀಗಾಗಿ ಒಂದು ಖಾತೆ ತೆರೆಯಲು ಅಂಚೆ ಕಚೇರಿಗೆ ಬಂದಿದ್ದೇನೆಂದು ಹೇಳಿದ್ದಾರೆ.

ಕುಂದನಹಳ್ಳಿಯ ಅನಿತಾ ಮಾತನಾಡಿ, ಅಧಿಕಾರಕ್ಕೆ ಬಂದರೆ 6 ಸಾವಿರ ರೂಪಾಯಿ ಕೊಡುತ್ತೇವೆಂದು ಬಿಜೆಪಿ ಹೇಳಿದೆ ಎಂದು ಇತರೆ ಮಹಿಳೆಯರು ಹೇಳಿದರು, ಹೀಗಾಗಿ ಖಾತೆ ತೆರೆಯುತ್ತಿದ್ದೇನೆಂದು ತಿಳಿಸಿದ್ದಾರೆ.ಪೋಸ್ಟ್‌ಮ್ಯಾನ್ ಜೆ ವಿಜಯನ್ ಮಾತನಾಡಿ, ಕಳೆದ ಒಂದು ವಾರದಿಂದ ಜನಸಂದಣಿ ತುಂಬಾ ಹೆಚ್ಚಾಗಿದೆ. ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ, ತಾಯಿಯ ಹೆಸರು ಮತ್ತು ಬಯೋಮೆಟ್ರಿಕ್‌ಗಳನ್ನು ಪಡೆದು ತಕ್ಷಣವೇ ಖಾತೆಗಳನ್ನು ತೆರೆಯುತ್ತಿದ್ದೇವೆಂದು ಹೇಳಿದ್ದಾರೆ.

ಕರ್ನಾಟಕ ಅಂಚೆ ಕಚೇರಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ದಿವಾಕರ ಎನ್‌ಆರ್ ಮಾತನಾಡಿ, ಕಳೆದ ಒಂದು ತಿಂಗಳಲ್ಲಿ 3,000 ಖಾತೆಗಳನ್ನು ತೆರೆಯಲಾಗಿದೆ ಎಂದು ಹೇಳಿದ್ದಾರೆ.

ಐಪಿಪಿಬಿ ಖಾತೆ ಏಕೆ ಬೇಕು?

ಖಾಸಗಿ ಹಾಗೂ ಸರ್ಕಾರಿ ಬ್ಯಾಂಕ್‌ಗಳಲ್ಲಿಖಾತೆ ಇಲ್ಲದೇ ನೇರ ಖಾತೆಗೆ ಜಮೆಯಾಗುವ ಸರಕಾರಿ ಯೋಜನೆಗಳ ಹಣ ಪಡೆಯಲು ಸಾಧ್ಯವಿಲ್ಲದ ಫಲಾನುಭವಿಗಳು ಪೋಸ್ಟ್‌ ಆಫೀಸ್‌ನಲ್ಲಿ ಐಪಿಪಿಬಿ ಖಾತೆ ತೆರೆಯಬೇಕು. ಅಂತವರಿಗೆ ಸರ್ಕಾರಿ ಯೋಜನೆ ಹಣ ನೇರವಾಗಿ ಖಾತೆಗೆ ಬರಲು ಅನುಕೂಲವಾಗುತ್ತದೆ. ಹೀಗಾಗಿ ಅಂಚೆ ಕಚೇರಿಯಲ್ಲಿ ಈ ಖಾತೆ ಮಾಡಿಸಬೇಕು ಎಂದು ಸರ್ಕಾರ ಹೇಳಿದೆ.

ಆದರೆ, ಮಹಿಳೆಯರು ಅದನ್ನು ತಪ್ಪಾಗಿ ಅರ್ಥೈಸಿಕೊಂಡು ಈಗಾಗಲೇ ಬೇರೆ ಬ್ಯಾಂಕ್‌ಗಳಲ್ಲಿ ಖಾತೆ ಇದ್ದಾಗಲೂ, ಪೋಸ್ಟ್‌ ಆಫೀಸ್‌ನಲ್ಲಿ ಹೊಸದಾಗಿ ಐಪಿಪಿಬಿ ಖಾತೆ ತೆರೆಯಲು ಮುಂದಾಗುತ್ತಿರುವುದು ಇಷ್ಟೆಲ್ಲ ಗೊಂದಲ, ಗದ್ದಲಕ್ಕೆ ಕಾರಣವಾಗಿದೆ


Share