ಜೂನ್ 4ರ ಬಳಿಕ ರಾಜ್ಯ ಸರ್ಕಾರ, ಕಾಂಗ್ರೆಸ್‌ನಲ್ಲಿ ಬದಲಾವಣೆ?

ಜೂನ್ 4ರ ಬಳಿಕ ರಾಜ್ಯ ಸರ್ಕಾರ, ಕಾಂಗ್ರೆಸ್‌ನಲ್ಲಿ ಬದಲಾವಣೆ?

Share

ಬೆಂಗಳೂರು: ಲೋಕಸಭಾ ಚುನಾವಣೆಯ ಗೆಲುವಿನ ಲೆಕ್ಕಾಚಾರದ ನಡುವಲ್ಲೇ ರಾಜ್ಯ ರಾಜಕೀಯ ವಲಯದಲ್ಲಿ ಕಾಂಗ್ರೆಸ್ ಹಾಗೂ ಸಚಿವರ ಬದಲಾವಣೆ ಕುರಿತು ಚರ್ಚೆಗಳು ಆರಂಭವಾಗಿವೆ.

ಜೂನ್.4 ರ ಬಳಿಕ ಸರಿಯಾಗಿ ಕಾರ್ಯನಿರ್ವಹಿಸದ ಹಾಗೂ ದೂರುಗಳು ಹೆಚ್ಚು ಕೇಳಿಬಂದಿರುವ ಸಚಿವರನ್ನು ಸಂಪುಟದಿಂದ ಕೈಬಿಡುವ ಕುರಿತು ಗುಸುಗುಸುಗಳು ಕೇಳಿಬಂದಿದ್ದು, ಇದು ಕೆಲ ನಾಯಕರ ನಿದ್ದೆಗೆಡಿಸಿದೆ.

ಈ ವರ್ಷಜದ ಕೊನೆಯಲ್ಲಿ ಬಿಬಿಎಂಪಿ ಸೇರಿದಂತೆ ಸ್ಥಳೀಯ ಸಂಸ್ಥೆ ಚುನಾವಣೆಗಳು ನಡೆಯಲಿದ್ದು, ನಂತರ ಸಚಿವ ಸಂಪುಟ ಪುನಾರಚನೆಯಾಗಬಹುದು ಎಂದು ಹೇಳಲಾಗುತ್ತಿದೆ.

ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್​ಗಳಿಗೆ ಚುನಾವಣೆ ನಡೆಸಲಾಗುವುದು ಮತ್ತು ಡಿಲಿಮಿಟೇಶನ್ ಪ್ರಕ್ರಿಯೆ ಮುಗಿದ ಬಳಿಕ ಬೃಹತ್ ಬೆಂಗಳೂರು ಮಹಾನಹರ ಪಾಲಿಕೆಗೂ ಚುನಾವಣೆ ನಡೆಸಲಾಗುವುದು ಎಂದು ಹೇಳಿದರು.

ಇದಕ್ಕೂ ಮುನ್ನ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಾಕ್ಷ, ಉಪಮುಖ್ಯಮಂತ್ರಿಯಾಗಿರುವ ಡಿಕೆ ಶಿವಕುಮಾರ್ ಅವರು ಆಡಿದ ಒಂದು ಮಾತು ಕೂಡ ರಾಜಕೀಯ ವಲಯದಲ್ಲಿ ಚರ್ಚೆಗೆ ಎಡೆಮಾಡಿಕೊಟ್ಟಿತ್ತು.ಡಿಕೆಶಿ ಹೇಳಿದ್ದ ಈ ಒಂದು ಮಾತು ಕೆಲವರಲ್ಲಿ ಕುತೂಹಲ ಹೆಚ್ಚಿಸಿದ್ದು, ಇನ್ನು ಕೆಲ ನಾಯಕರಿಗೆ ಟೆನ್ಷನ್ ಶುರುವಾಗುವಂತ ಮಾಡಿತ್ತು.

ಸ್ಥಳೀಯ ಚುನಾವಣೆ ಕುರಿತು ಚರ್ಚಿಸಲು ಡಿಕೆ ಶಿವಕುಮಾರ್ ಅವರು ಸ್ಥಳೀಯ ನಾಯಕರೊಂದಿಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಸ್ಥಳೀಯ ನಾಯಕರನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಅಧ್ಯಕ್ಷನಾಗಿ ನಾಲ್ಕು ವರ್ಷಗಳಾಯ್ತು. ಇನ್ನೆಷ್ಟು ದಿನ ಇರ್ತೇನೆ ಎನ್ನುವುದು ಮುಖ್ಯವಲ್ಲ. ಈ ನಾಲ್ಕು ವರ್ಷಗಳಲ್ಲಿ ನನ್ನ ಅಧ್ಯಕ್ಷತೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದಿದೆ ಎಂದು ಹೇಳಿದ್ದರು. ಈ ಹೇಳಿಕೆ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಚರ್ಚೆಗಳು ಶುರುವಾಗಿದೆ.

ಕೇವಲ ಸಚಿವರಷ್ಟೇ ಅಲ್ಲ, ಕಾಂಗ್ರೆಸ್ ಘಟಕದಲ್ಲೂ ಪ್ರಮುಖ ಬದಲಾವಣೆಗಳಾಗಬಹುದು ಎಂದು ಕೆಲವು ಮುಖಂಡರು ಹೇಳುತ್ತಿದ್ದಾರೆ.

ಬದಲಾವಣೆ ಊಹಾಪೋಹ ನಿಜವಾಗಿದ್ದೇ ಆದರೆ, ಲೋಕಸಭಾ ಚುನಾವಣೆಯಲ್ಲಿ ದಕ್ಷಿಣಕ್ಕಿಂತ ಉತ್ತರ ಭಾಗದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆದ್ದರೆ, ಈ ಪ್ರದೇಶದ ನಾಯಕರಿಗೆ ಸಚಿವ ಸ್ಥಾನ ನೀಡುವಂತೆ ಕೂಗು ಹೆಚ್ಚಾಗುವ ಸಾಧ್ಯತೆಗಳಿವೆ.

ಪ್ರಸ್ತುತ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಸೇರಿದಂತೆ ಎಲ್ಲ ಪ್ರಮುಖ ಹುದ್ದೆಗಳು ರಾಜ್ಯದ ದಕ್ಷಿಣ ಭಾಗದ ನಾಯಕರ ಪಾಲಾಗಿವೆ.ಈ ನಡುವೆ ಉತ್ತರ ಭಾಗಕ್ಕೆ ಸಿಕ್ಕ ಸ್ಥಾನ ಕಡಿಮೆಯಿದೆ ಎಂದು ಹಿರಿಯ ಸಚಿವರೊಬ್ಬರು ಹೇಳಿದ್ದಾರೆ. ಪ್ರಮುಖ ಹುದ್ದೆಗಳು ದಕ್ಷಿಣ ಪ್ರದೇಶಗಳ ನಾಯಕರ ಪಾಲಾಗಿದೆ ಎಂದು ತಿಳಿಸಿದ್ದಾರೆ.

ಉತ್ತರ ಕರ್ನಾಟಕದ ಮತ್ತೊಬ್ಬ ಹಿರಿಯ ನಾಯಕ ಮಾತನಾಡಿ,ಲೋಕಸಭಾ ಚುನಾವಣಾ ಫಲಿತಾಂಶ ಹೊರಬಿದ್ದ ನಂತರ ಸ್ಥಾನಗಳ ಕುರಿತು ಧ್ವನಿ ಎತ್ತಲಾಗುವುದು ಎಂದು ಹೇಳಿದ್ದಾರೆ.

ರಾಜಕೀಯ ವಿಶ್ಲೇಷಕ ಬಿ.ಎಸ್.ಮೂರ್ತಿ ಮಾತನಾಡಿ, ‘ಬಿಬಿಎಂಪಿ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಗಿಯುವವರೆಗೆ ಪಕ್ಷ ಮತ್ತು ಸರ್ಕಾರದಲ್ಲಿ ಬದಲಾವಣೆ ಉತ್ತಮ ಆಲೋಚನೆಯಲ್ಲ ಎಂದು ಹೇಳಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗೆದ್ದರೆ, ಉತ್ತರದ ನಾಯಕರು ಧ್ವನಿ ಗಟ್ಟಿಯಾಗಲಿದೆ. ಇಂಡಿಯಾ ಮೈತ್ರಿ ಒಕ್ಕೂಟ ಗೆದ್ದು ಕೇಂದ್ರದಲ್ಲಿ ಸರ್ಕಾರ ರಚಿಸಿದರೆ, ಕೇಂದ್ರ ಸಚಿವ ಸಂಪುಟದಲ್ಲಿ ಹೆಚ್ಚಿನ ಪ್ರಾತಿನಿಧ್ಯವನ್ನು ಬಯಸಬಹುದು. ಅಂತಹ ಪರಿಸ್ಥಿತಿಯಲ್ಲಿ ಕರ್ನಾಟಕದ ಸ್ಥಾನವು ಮುಖ್ಯವಾಗಿದೆ ಎಂದು ತಿಳಿಸಿದ್ದಾರೆ.


Share