ಮೈಸೂರು: ಸಂಸದ ಪ್ರಜ್ವಲ್ ರೇವಣ್ಣನನ್ನು ವಿದೇಶಕ್ಕೆ ಕಳಿಸಿರುವುದೇ ಅವರ ತಾತ ಹೆಚ್.ಡಿ. ದೇವೇಗೌಡ, ವಿದೇಶಕ್ಕೆ ಕಳುಹಿಸಿ ಈಗ ಪತ್ರ ಬರೆದು ಏನು ಮಾಡುತ್ತಾರೆ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಟೀಕಿಸಿದರು.
ಲೈಂಗಿಕ ಹಗರಣದ ಆರೋಪಿಯಾಗಿರುವ ಪ್ರಜ್ವಲ್ ಅವರು ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಭಾರತಕ್ಕೆ ವಾಪಸಾಗಿ ಪೊಲೀಸರಿಗೆ ಶರಣಾಗುವಂತೆ ದೇವೇಗೌಡ ಅವರು ತಮ್ಮಮೊಮ್ಮಗ ಪ್ರಜ್ವಲ್ ರೇವಣ್ಣಗೆ ಪತ್ರ ಬರೆದಿದ್ದಾರೆ.
ಈ ಪತ್ರ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ನನ್ನ ಪ್ರಕಾರ ಹಾಸನದ ಸಂಸದ ಪ್ರಜ್ವಲ್ ರೇವಣ್ಣನನ್ನು ವಿದೇಶಕ್ಕೆ ಕಳುಹಿಸಿರುವುದೇ ದೇವೇಗೌಡರು. ಸಾರ್ವಜನಿಕವಾಗಿ ಅನುಕಂಪಗಳಿಸಲು ಪತ್ರ ಬರೆದಿದ್ದಾರೆ. ವಿದೇಶಕ್ಕೆ ಕಳುಹಿಸಿರುವುದು ಅವರೇ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ಕುಮಾರಸ್ವಾಮಿ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ಣವರ ಅಣ್ಣನ ಮಗ ಅತ್ಯಾಚಾರ, ಲೈಂಗಿಕ ದೌರ್ಜನ್ಯವನ್ನೆಲ್ಲಾ ಮಾಡಿದ್ದಾನೆ. ಯಾರು ಅತ್ಯಾಚಾರ ಮಾಡಿದ್ದಾರೆಯೋ ಅದು ದೊಡ್ಡ ಅಪರಾಧ. ಈ ಗಂಭೀರ ವಿಚಾರದಿಂದ ಗಮನವನ್ನು ಬೇರೆಡೆ ಸೆಳೆಯಲು ಕುಮಾರಸ್ವಾಮಿ ಏನೇನೋ ಹೇಳುತ್ತಿದ್ದಾರೆ. ಶಿವಕುಮಾರ್ ಮತ್ತಿತರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.ಕುಮಾರಸ್ವಾಮಿ ಈ ನೆಲದ ಕಾನೂನಿಗೆ ಗೌರವ ಕೊಡಬೇಕು. ಅವರ ಅಣ್ಣನ ಮಗ ತಪ್ಪು ಮಾಡಿದ್ದಾನೆ. ಅವರು ಆರೋಪಿಯಷ್ಟೆ ಅಪರಾಧಿಯಲ್ಲ ಎಂದೂ ಕುಮಾರಸ್ವಾಮಿ ಹೇಳಿದ್ದಾರೆ. ನಾನೂ ಆರೋಪಿ ಎಂದೇ ಹೇಳುತ್ತೇನೆ. ಈ ವಿಷಯವೆಲ್ಲವೂ ನ್ಯಾಯಾಲಯದಲ್ಲಿ ಸಾಬೀತಾಗಬೇಕಾಗುತ್ತದೆ ಎಂದರು.
ಪ್ರಜ್ವಲ್ ವಿರುದ್ಧ ಎಷ್ಟು ದೂರು ಸಲ್ಲಿಕೆಯಾಗಿವೆ ಎಂಬ ಪ್ರಶ್ನೆಗೆ, ‘ನಿಮಗೆ ಗೊತ್ತಿಲ್ಲವೇ?’ ಎಂದು ಕೇಳಿದರು. ಸರ್ಕಾರಕ್ಕೆ ಇರುವ ಮಾಹಿತಿಯು ಎಸ್‌ಐಟಿಗೆ ಇರುವ ಮಾಹಿತಿಯಾಗಿದೆ ಎಂದರು.
ಪ್ರಜ್ವಲ್ ಅವರ ಮನೆಯವರಿಗೆ ಹೇಳದೇ ಹೊರಟು ಹೋಗಿದ್ದಾನೆಯೇ? ಲೋಕಸಭೆ ಚುನಾವಣೆಯಲ್ಲಿ ಪ್ರಚಾರಕ್ಕೆ ಹೋಗಿದ್ದಾಗ ಪ್ರಜ್ವಲ್‌ನನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡು ಇವನು ರೇವಣ್ಣ ಮಗನಲ್ಲ, ನನ್ನ ಮಗ ಎಂದು ತಿಳಿದುಕೊಳ್ಳಿ ಎಂದು ಕುಮಾರಸ್ವಾಮಿ ಹೇಳಿರಲಿಲ್ಲವೇ? ಅದು ಸಂಪರ್ಕವಲ್ಲವೇ? ಸಂಪರ್ಕದಲ್ಲಿ ಇರಲಿಲ್ಲ ಎಂದು ಈಗ ಹೇಳಿದರೆ ಹೇಗೆ? ಎಂದು ವ್ಯಂಗ್ಯವಾಗಿ ಕೇಳಿದರು.
ಎಸ್‌ಐಟಿ ಮೇಲೆ ನಮಗೆ ಬಹಳ ವಿಶ್ವಾಸವಿದೆ. ಅವರು ನಮ್ಮ ಪೊಲೀಸರೇ. ವಿಶೇಷವಾಗಿ ತನಿಖೆ ನಡೆಸಲಿ, ಹೆಚ್ಚು ಗಮನಕೊಡಲೆಂದು ಆ ತಂಡ ರಚಿಸಿದ್ದೇವೆ’ ಎಂದರು.
ಲೈಂಗಿಕ ಹಗರಣದಲ್ಲಿ ಆರೋಪಿಯಾಗಿರುವ ಹಾಗೂ ಬಂಧನ ವಾರಂಟ್ ಎದುರಿಸುತ್ತಿರುವ ತಮ್ಮ ಮೊಮ್ಮಗನಿಗೆ ಜೆಡಿ(ಎಸ್) ವರಿಷ್ಠ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಕಟು ಎಚ್ಚರಿಕೆ ನೀಡಿದ್ದು, ಭಾರತಕ್ಕೆ ವಾಪಸಾಗು, ಪೊಲೀಸರಿಗೆ ಶರಣಾಗು, ಇಲ್ಲದೇ ಹೋದಲ್ಲಿ ನನ್ನ ಕೋಪಕ್ಕೆ ತುತ್ತಾಗುವೆ ಎಂದು ಪತ್ರ ಬರೆದಿದ್ದಾರೆ.