ನವದೆಹಲಿ: ಆರ್ಥಿಕ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಖ್ಯಾತ ಪೇಮೆಂಟ್ ಸೇವಾ ಸಂಸ್ಥೆ ಪೇಟಿಎಂ ತನ್ನ ಸುಮಾರು 6ಸಾವಿರಕ್ಕೂ ಅಧಿಕ ಸಿಬ್ಬಂದಿಗಳ ವಜಾಕ್ಕೆ ಮುಂದಾಗಿದೆ.
Paytm ಮೂಲ ಕಂಪನಿ One97 ಕಮ್ಯುನಿಕೇಷನ್ಸ್ ತನ್ನ ಉದ್ಯೋಗಿ ವೆಚ್ಚವನ್ನು ಈ ಆರ್ಥಿಕ ವರ್ಷದಲ್ಲಿ ಕಡಿಮೆ ಮಾಡುವ ಉದ್ದೇಶದಿಂದ ವಜಾ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ. ಕಂಪನಿಯು ತನ್ನ ಒಟ್ಟಾರೆ ಉದ್ಯೋಗಿಗಳ ಪೈಕಿ ಶೇಕಡಾ 15-20 ರಷ್ಟು ಉದ್ಯೋಗಿಗಳನ್ನು ವಜಾ ಮಾಡಬಹುದು ಎಂದು ಫೈನಾನ್ಶಿಯಲ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.ಇದರರ್ಥ One97 ಕಮ್ಯುನಿಕೇಷನ್ಸ್ 400-500 ಕೋಟಿ ಉಳಿಸುವ ಗುರಿಯನ್ನು ಹೊಂದಿರುವುದರಿಂದ ಸಂಸ್ಥೆಯ ಸುಮಾರು 5 ರಿಂದ 6,300 ಉದ್ಯೋಗಿಗಳನ್ನು ವಜಾ ಮಾಡಲು ಮುಂದಾಗಿದೆ ಎಂದು ಹೇಳಲಾಗಿದೆ.
FY23 ರಲ್ಲಿ, One97 ಕಮ್ಯುನಿಕೇಷನ್ಸ್ ಸರಾಸರಿ 32,798 ಉದ್ಯೋಗಿಗಳನ್ನು ಹೊಂದಿದ್ದು, ಈ ಪೈಕಿ 29,503 ಉದ್ಯೋಗಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. FY24ರಲ್ಲಿ ಸಂಸ್ಥೆಯ ಒಟ್ಟು ಉದ್ಯೋಗಿ ವೆಚ್ಚಗಳು ವರ್ಷದಿಂದ ವರ್ಷಕ್ಕೆ ಶೇ.34 ರಷ್ಟು ಅಂದರೆ ಸುಮಾರು 3,124 ಕೋಟಿ ರೂಗೆ ಏರಿದೆ.
ಮೂಲಗಳ ಪ್ರಕಾರ ಕಳೆದ ವರ್ಷದ ಡಿಸೆಂಬರ್‌ನಲ್ಲೇ ಸಂಸ್ಥೆ 1,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸುವ ಮೂಲಕ ತನ್ನ ಉದ್ಯೋಗ ಕಡಿತ ಪ್ರಕ್ರಿಯೆಗೆ ಚಾಲನೆ ನೀಡಿತ್ತು. ಇದೀಗ ಮತ್ತೆ ಸುಮಾರು 6 ಸಾವಿರಕ್ಕೂ ಉದ್ಯೋಗಿಗಳನ್ನು ವಜಾ ಮಾಡಲು ಮುಂದಾಗಿದೆ. ಕಂಪನಿಯು ಕಾರ್ಯಾಚರಣೆಗಳನ್ನು ಸುಗಮಗೊಳಿಸುವ ಮತ್ತು ವೆಚ್ಚವನ್ನು ಕಡಿತಗೊಳಿಸುವ ಗುರಿಯನ್ನು ಹೊಂದಿದೆ ಎಂದು ವರದಿ ಹೇಳಿದೆ.ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ Paytm 550 ಕೋಟಿ ನಿವ್ವಳ ನಷ್ಟವನ್ನು ವರದಿ ಮಾಡಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ನಿರ್ಬಂಧಗಳನ್ನು ವಿಧಿಸಿದ ನಂತರ ಮಾರ್ಚ್ ತ್ರೈಮಾಸಿಕದಲ್ಲಿ ಕಂಪನಿಯ ಕಾರ್ಯಾಚರಣೆಗಳ ಆದಾಯವು ವರ್ಷದಿಂದ ವರ್ಷಕ್ಕೆ ಶೇ 3 ರಷ್ಟು ಕುಸಿದು 2,267 ಕೋಟಿಗಳಿಗೆ ತಲುಪಿದೆ.