ಡೆಹ್ರಾಡೂನ್: ಖ್ಯಾತ ಧಾರ್ಮಿಕ ಯಾತ್ರಾ ತಾಣ ಕೇದಾರನಾಥದಲ್ಲಿ ಹೆಲಿಕಾಪ್ಟರ್ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದ್ದು, ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದಾರೆ.
ಇಂದು (ಶುಕ್ರವಾರ) ಮುಂಜಾನೆ 7 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಹೆಲಿಕಾಪ್ಟರ್ ಸಿರ್ಸಿ ಹೆಲಿಪ್ಯಾಡ್‌ನಿಂದ ಕೇದಾರನಾಥಕ್ಕೆ ಟೇಕಾಫ್ ಆಗಿತ್ತು.
ಮಾರ್ಗ ಮಧ್ಯದಲ್ಲಿ ತಾಂತ್ರಿಕ ಅಡಚಣೆ ಉಂಟಾಗಿದ್ದು, ಪೈಲಟ್ ತೆಗೆದುಕೊಂಡ ತ್ವರಿತ ನಿರ್ಧಾರದಿಂದಾಗಿ ದೊಡ್ಡ ಅನಾಹುತ ತಪ್ಪಿದೆ. ಎಲ್ಲರೂ ಸುರಕ್ಷಿತವಾಗಿದ್ದಾರೆ. ಪೊಲೀಸರು ಮತ್ತು ಎಸ್‌ಡಿಆರ್‌ಎಫ್ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿವೆ.ಹೆಲಿಕಾಪ್ಟರ್‌ನಲ್ಲಿ ಪೈಲಟ್ ಸೇರಿದಂತೆ ಏಳು ಮಂದಿ ಯಾತ್ರಿಕರು ಇದ್ದರು. ಇದ್ದಕ್ಕಿದ್ದ ಹಾಗೆ ತಾಂತ್ರಿಕ ಅಡಚಣೆ ಉಂಟಾದ ಪರಿಣಾಮ ಕೇದಾರನಾಥದ ಹೆಲಿಪ್ಯಾಡ್‌ನಿಂದ ಕೆಲವು ಮೀಟರ್‌ಗಳ ದೂರದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಹೆಲಿಕಾಪ್ಟರ್‌ನಲ್ಲಿದ್ದ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಯಾತ್ರಾರ್ಥಿಗಳು ದೇವರ ದರ್ಶನ ಪಡೆದ ನಂತರ ಹಿಂತಿರುಗಲಿದ್ದಾರೆ. ಘಟನೆ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ರುದ್ರಪ್ರಯಾಗದ ಜಿಲ್ಲಾ ಮ್ಯಾಜಿಸ್ಟ್ರೇಟ್ ಸೌರಭ್ ಗಹರ್ವಾರ್ ಹೇಳಿದ್ದಾರೆ.ಚಾರ್ ಧಾಮ್ ಯಾತ್ರೆಗೆ ಹರಿದ ಭಕ್ತಸಾಗರ
ಇನ್ನು ತಿಂಗಳ ಹಿಂದೆ ಆರಂಭವಾದ ಪವಿತ್ರ ಚಾರ್ ಧಾಮ್ ಯಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದು, ಇಲ್ಲಿಯವರೆಗೆ 3 ಲಕ್ಷ 40 ಸಾವಿರ ಯಾತ್ರಿಕರು ಗಂಗೋತ್ರಿ-ಯಮುನೋತ್ರಿ ಧಾಮಕ್ಕೆ ಭೇಟಿ ನೀಡಿದ್ದಾರೆ. ಕಳೆದ ಗುರುವಾರದವರೆಗೆ 1 ಲಕ್ಷದ 64 ಸಾವಿರಕ್ಕೂ ಹೆಚ್ಚು ಯಾತ್ರಾರ್ಥಿಗಳು ಯಮುನೋತ್ರಿ ಧಾಮಕ್ಕೆ ಭೇಟಿ ನೀಡಿದ್ದು, 1 ಲಕ್ಷದ 51 ಸಾವಿರ ಯಾತ್ರಿಕರು ಗಂಗೋತ್ರಿ ಧಾಮಕ್ಕೆ ಭೇಟಿ ನೀಡಿದ್ದಾರೆ. ಗುರುವಾರದವರೆಗೆ 1 ಲಕ್ಷ 77 ಸಾವಿರದ 749 ಭಕ್ತರು ಬದರಿನಾಥ ಧಾಮಕ್ಕೆ ಭೇಟಿ ನೀಡಿದ್ದಾರೆ.