ಅಜಾಗರೂಕ ಚಾಲನೆ: ಕಾರು, ಬೈಕ್ ಗಳ ಜಖಂಗೊಳಿಸಿದ್ದ ವ್ಯಕ್ತಿ ಬಂಧನ

ಅಜಾಗರೂಕ ಚಾಲನೆ: ಕಾರು, ಬೈಕ್ ಗಳ ಜಖಂಗೊಳಿಸಿದ್ದ ವ್ಯಕ್ತಿ ಬಂಧನ

Share

ಬೆಂಗಳೂರು: ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿ, ರಸ್ತೆಯಲ್ಲಿ ನಿಲುಗಡೆ ಮಾಡಲಾಗಿದ್ದ ಕಾರು ಹಾಗೂ ಬೈಕ್ ಗಳನ್ನು ಜಖಂಗೊಳಿಸಿದ್ದ ಚಾಲಕನೊಬ್ಬನನ್ನು ನಗರ ಪೊಲೀಸರು ಗುರುವಾರ ಬಂಧನಕ್ಕೊಳಪಡಿಸಿದ್ದಾರೆ.

ಚಾಲಕನ ದುರ್ವರ್ತನೆ ಕುರಿತು ಮಾಜಿ ಕಾನೂನು ಸಚಿವ ಹಾಗೂ ರಾಜಾಜಿನಗರ ಶಾಸಕ ಎಸ್.ಸುರೇಶ್ ಕುಮಾರ್ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ವಿಡಿಯೋ ಸಹಿತ ಪೋಸ್ಟ್ ಮಾಡಿದ್ದರು.

KA 02 MK 4206: ಈ ನಂಬರ್ ಹೊಂದಿರುವ ಮಾರುತಿ ಕಾರ್ ಇಂದು ಮಧ್ಯಾಹ್ನ ಬಸವೇಶ್ವರನಗರದ ಸುತ್ತಮುತ್ತ ಯದ್ವಾ ತದ್ವಾ ಓಡಿ ಅನೇಕ ವಾಹನಗಳಿಗೆ ಜಖಂ ಮಾಡಿ, ಒಂದು ಮಗು ಹಾಗೂ ಓರ್ವ ಯುವಕನಿಗೆ ಘಾಸಿ ಮಾಡಿ ಹೋಗಿದೆ ಎಂದು ಹೇಳಿದ್ದರು. ಅಲ್ಲದೆ, ಈ ಪೋಸ್ಟ್’ನ್ನು ಸಂಚಾರಿ ವಿಭಾಗದ ಡಿಸಿಪಿ ಹಾಗೂ ಬೆಂಗಳೂರು ಸಂಚಾರಿ ಪೊಲೀಸರಿಗೆ ಟ್ಯಾಗ್ ಮಾಡಿದ್ದರು.

ಮಾಜಿ ಶಾಸಕರು ಪೋಸ್ಟ್ ಹಾಕುತ್ತಿದ್ದಂತೆಯೇ ಕ್ಷಿಪ್ರವಾಗಿ ಪ್ರತಿಕ್ರಿಯಿಸಿದ ವಿಜಯನಗರ ಸಂಚಾರ ಪೊಲೀಸರು, 50 ವರ್ಷದ ಚಾಲಕನನ್ನು ಬಂಧಿಸಿ, ಕಾರನ್ನು ವಶಪಡಿಸಿಕೊಂಡಿದ್ದಾರೆ.ಚಾಲಕನ ಅಜಾಗರೂಕ ಚಾಲನೆಯಿಂದಾಗಿ ವೆಂಕಟೇಶ್ ಎಂಬ ವ್ಯಕ್ತಿ ಗಾಯಗೊಂಡಿದ್ದು, ಮಗುವೊಂದು ಅಪಘಾತದಿಂದ ಸ್ವಲ್ಪದರಲ್ಲೇ ಪಾರಾಗಿದೆ ಎನ್ನಲಾಗಿದೆ.

ವೆಸ್ಟ್ ಆಫ್ ಕಾರ್ಡ್ ರಸ್ತೆಯ ಎನ್‌ಪಿಎಸ್ ಜಂಕ್ಷನ್ ಬಳಿ ಮಂಗಳವಾರ ಬೆಳಗ್ಗೆ 8.30ಕ್ಕೆ ಈ ಘಟನೆ ನಡೆದಿದ್ದು, ದ್ವಿಚಕ್ರ ವಾಹನ ಮತ್ತು ಕಾರುಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.

ಚಾಲಕನನ್ನು ವಶಕ್ಕೆ ಪಡೆದು ಕಾರನ್ನು ವಶಪಡಿಸಿಕೊಳ್ಳಲಾಗಿದೆ ಸಾರ್ವಜನಿಕ ಸ್ಥಳದಲ್ಲಿ ಅಜಾಗರೂಕ ಚಾಲನೆ ಮಾಡಿದ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 279 ಮತ್ತು ಐಎಂವಿ ಕಾಯ್ದೆಯಡಿಯಲ್ಲಿ ಸ್ವಯಂ ಪ್ರೇರಿತ ಪ್ರಕರಣವನ್ನು ದಾಖಲಿಸಿಕೊಳ್ಳಳಾಗಿದೆ. ಬುಧವಾರ ರಾತ್ರಿ ಆರೋಪಿಯನ್ನು ಠಾಣೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ರಸ್ತೆಯಲ್ಲಿ ನಾಗರೀಕ ಕೆಲಸ ನಡೆಯುತ್ತಿದ್ದರಿಂದ ಕಾರು ಚಾಲನೆ ಚಾಲಕನಿಗೆ ಕಷ್ಟವಾಗಿತ್ತು. ಹೀಗಾಗಿ ಸಾರ್ವಜನಿಕ ರಸ್ತೆಯಲ್ಲಿ ಚಾಲನೆ ಮಾಡಲು ಆರಂಭಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಸ್ಥಳೀಯರು ಜಗಳವಾಡಿದ್ದಾರೆ. ಈ ವೇಳೆ ಭಯಭೀತನಾಗಿರುವ ಚಾಲಕ ಕಾರನ್ನು ಹಿಂತೆಗೆಯುವ ವೇಳೆ ಕೆಲವು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಇಡೀ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.


Share