ಬೆಂಗಳೂರು: ರಾಜ್ಯದಲ್ಲಿ ಬಂಡವಾಳ ಹೂಡಿಕೆ ವಿಚಾರದಲ್ಲಿ ಬಿಜೆಪಿ ನಾಯಕರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ.
ನಿರುತ್ಸಾಹ ಮತ್ತು ನಿದ್ದೆಯಲ್ಲಿರುವ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದಾಗಿ ರಾಜ್ಯದಲ್ಲಿ ಸಾರ್ಟ್‌ಫೋನ್ ಮತ್ತು ಡ್ರೋಣ್ ಉತ್ಪಾದಿಸಲು ಮುಂದಾಗಿದ್ದ ಗೂಗಲ್ ಇದೀಗ ಶತಕೋಟಿ ಬಂಡವಾಳ ಹೂಡಿಕೆಯಿಂದ ಹಿಂದೆ ಸರಿದಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆರೋಪಿಸಿದ್ದಾರೆ.
‘ಗೂಗಲ್ ಸ್ಮಾರ್ಟ್ ಫೋನ್ ಮತ್ತು ಡ್ರೋನ್‌ಗಳನ್ನು ನೆರೆಯ ತಮಿಳುನಾಡಿನಲ್ಲಿ ಉತ್ಪಾದಿಸಲಿದೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ವಿಜಯೇಂದ್ರ ಅವರು ಈ ಆರೋಪ ಮಾಡಿದ್ದರು.ಈ ಬಗ್ಗೆ ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ಬಿಜೆಪಿ ನಾಯಕರು ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಬಗ್ಗೆ ಸುಳ್ಳು ಮಾಹಿತಿ ಟ್ವೀಟ್ ಮಾಡುತ್ತಿದ್ದಾರೆ. ಸುಳ್ಳು ಮಾಹಿತಿ ಹಬ್ಬಿಸುವುದಕ್ಕೆ ನಾಚಿಕೆಯಾಗಬೇಕು. ಚುನಾವಣೆ ನಂತರ ದಾಖಲೆ ಸಹಿತ ಪುರಾವೆ ನೀಡುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.
ಕಂಪನಿಗಳು ಕರ್ನಾಟಕಕ್ಕಿಂತ ನೆರೆಯ ರಾಜ್ಯಗಳಲ್ಲಿ ಹೂಡಿಕೆ ಮಾಡುತ್ತಿವೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ, ಅವರು (ಬಿಜೆಪಿ ನಾಯಕರು) ವಾಸ್ತವವನ್ನು ಪರಿಶೀಲಿಸಬೇಕು ಎಂದರು.
ಈ ಹಿಂದೆ ಬಿಜೆಪಿಯ ಕಳಪೆ ಆಡಳಿತದಿಂದ ಲಕ್ಷಾಂತರ ಕೈಗಾರಿಕೋದ್ಯಮಿಗಳು, ಉದ್ಯಮಿಗಳು ದೇಶ ತೊರೆದಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹೂಡಿಕೆದಾರರು ಮತ್ತೊಮ್ಮೆ ರಾಜ್ಯದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿಸುತ್ತಿದ್ದಾರೆ ಎಂದು ಡಿಸಿಎಂ ಹೇಳಿದ್ದಾರೆ.
“ನಮ್ಮ ಕೈಗಾರಿಕಾ ಸಚಿವರು ಮತ್ತು ಐಟಿ ಸಚಿವರು ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕವು ಸಮೃದ್ಧಿ, ಪ್ರಗತಿ ಮತ್ತು ಶಾಂತಿಯ ನಾಡು ಎಂದು ಇಡೀ ದೇಶಕ್ಕೆ ತಿಳಿದಿದೆ. ಇಡೀ ಜಗತ್ತು ಬೆಂಗಳೂರು ಮತ್ತು ಕರ್ನಾಟಕದತ್ತ ನೋಡುತ್ತಿದೆ” ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದಾಗಿ ರಾಜ್ಯದಲ್ಲಿ ಸಾರ್ಟ್‌ಫೋನ್ ಮತ್ತು ಡ್ರೋಣ್ ಉತ್ಪಾದಿಸಲು ಮುಂದಾಗಿದ್ದ ಗೂಗಲ್ ಇದೀಗ ಶತಕೋಟಿ ಬಂಡವಾಳ ಹೂಡಿಕೆಯಿಂದ ಹಿಂದೆ ಸರಿದಿದೆ ಮತ್ತು ತಮಿಳುನಾಡಿನಲ್ಲಿ ಹೂಡಿಕೆ ಮಾಡಲು ಮುಂದಾಗಿದೆ ಎಂದು ವಿಜಯೇಂದ್ರ ಅವರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ್ದರು.