ಥೈರಾಯ್ಡ್ ನಿರ್ವಹಿಸಲು ಆಹಾರಕ್ರಮ ಪಾಲನೆ ನಿರ್ಣಾಯಕ: ತಜ್ಞರು

ಥೈರಾಯ್ಡ್ ನಿರ್ವಹಿಸಲು ಆಹಾರಕ್ರಮ ಪಾಲನೆ ನಿರ್ಣಾಯಕ: ತಜ್ಞರು

Share

ಬೆಂಗಳೂರು: ಥೈರಾಯ್ಡ್.. ಇದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಒಂದು. ಅದರಲ್ಲೂ ಪುರಷರಿಗಿಂತ ಮಹಿಳೆಯರಲ್ಲೇ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ.

ಥೈರಾಯ್ಡ್ ಕುತ್ತಿಗೆ ಭಾಗದಲ್ಲಿ ಚಿಟ್ಟಿಯಾಕಾರ ಗ್ರಂಥಿಯಾಗಿದ್ದು, ಇದು ಟಿ-3 ಹಾಗೂ ಟಿ-4 ಹಾರ್ಮೋನ್‌ಗಳನ್ನು ಉತ್ಪತ್ತಿಸುತ್ತವೆ. ಇದು ಪಿಟ್ಯುಟರಿ ಗ್ರಂಥಿಯಿಂದ ಸ್ರವಿಸುವ ಥೈರಾಯ್ಡ್ ಆಗಿದ್ದು, ಟಿಎಸ್‌ಎಚ್ ಹಾರ್ಮೋನ್ ಉತ್ಪದಿಸಲಿದ್ದು, ದೇಹದ ಪಚನ ಕ್ರಿಯೆಯನ್ನು ನಿಯಂತ್ರಿಸುತ್ತದೆ. ಥೈರಾಯ್ಡ್ನಲ್ಲಿ ಹೈಪೋ ಥೈರಾಯ್ಡ್ ಮಹಿಳೆಯರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಇದು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದು ಅತ್ಯಂತ ಅಪಾಯಕಾರಿ ಕೂಡ ಹೌದು. ಹೈಪೋ ಥೈರಾಯ್ಡ್‌ನಿಂದ ಪಚನ ಕ್ರಿಯೆ ಸಂಪೂರ್ಣ ನಿಧಾನವಾಗುವುದರಿಂದ ದೇಹದಲ್ಲಿ ತೂಕ ಹೆಚ್ಚಳವಾಗುತ್ತದೆ. ಇದು ಕೂದಲು ಉದುರುವಿಕೆ, ರಕ್ತದೊತ್ತಡ ಹೆಚ್ಚಳ, ಸಕ್ಕರೆ ಕಾಯಿಲೆ ಇತ್ಯಾದಿ ರೋಗಕ್ಕೆ ಕಾರಣವಾಗಬಹುದು. ಹೀಗಾಗಿ ಥೈರಾಯ್ಡ್ನ ಲಕ್ಷಣ ಕಂಡು ಬಂದ ಕೂಡಲೇ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆದುಕೊಳ್ಳಬೇಕು.

ಥೈರಾಯ್ಡ್ ಹೊಂದಿರುವವರು ಆಹಾರ ಸೇವನೆಯಲ್ಲಿ ಹೆಚ್ಚು ಗಮನ ವಹಿಸಬೇಕು. ಥೈರಾಯ್ಡ್ ನಿರ್ವಹಣೆಯಲ್ಲಿ ಆಹಾರ ಕ್ರಮ ನಿರ್ಣಾಯಕವಾಗಿದೆ. ಈ ಆಹಾರ ಕ್ರಮದಿಂದ ಥೈರಾಯ್ಡ್ ಸಮಸ್ಯೆ ಗುಣಪಡಿಸಲು ಸಾಧ್ಯವಾಗುವುದಿಲ್ಲ. ಆದರೆ, ಸಮಸ್ಯೆಯನ್ನು ನಿರ್ವಹಿಸಬಹುದಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಮೇ.25ರಂದು ವಿಶ್ವ ಥೈರಾಯ್ಡ್ ದಿನವಾಗಿದ್ದು, ಈ ಹಿನ್ನೆಲೆಯಲ್ಲಿ ತಜ್ಞರು ಥೈರಾಯ್ಡ್ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ.ಭಾರತದಲ್ಲಿ ಶೇ.8ರಷ್ಟು ಕುಟುಂಬಗಳು ಅಯೋಡಿನ್ ರಹಿತ ಉಪ್ಪನ್ನು ಸೇವನೆ ಮಾಡುತ್ತಿದ್ದು, ಅಯೋಡಿನ್ ಕೊರತೆಯ ಹೈಪೋಥೈರಾಯ್ಡಿಸಮ್ಗೆ ಕಾರಣವಾಗುತ್ತಿದೆ.

ಆಸ್ಟರ್ ಸಿಎಂಐ ಆಸ್ಪತ್ರೆಯ ಅಂತಃಸ್ರಾವಶಾಸ್ತ್ರದ ಸಲಹೆಗಾರ ಡಾ.ಮಹೇಶ್ ಡಿಎಂ ಮಾತನಾಡಿ, ಥೈರಾಯ್ಡ್ ಗ್ರಂಥಿಯು ಕೆಲವು ಪೋಷಕಾಂಶಗಳಾದ ಅಯೋಡಿನ್, ಸೆಲೆನಿಯಮ್ ಮತ್ತು ಸತುವಿನ ಮೇಲೆ ಅವಲಂಬಿತವಾಗಿದೆ. ಇವುಗಳಲ್ಲಿ, ಅಯೋಡಿನ್ ಮತ್ತು ಸೆಲೆನಿಯಮ್ ಥೈರಾಯ್ಡ್ ಕಾಯಿಲೆಗಳಾದ ಗಾಯಿಟರ್ ಮತ್ತು ಹೈಪೋಥೈರಾಯ್ಡಿಸಮ್‌ನಲ್ಲಿ ನೇರ ಪಾತ್ರವನ್ನು ವಹಿಸುತ್ತವೆ, ಆದರೆ, ಹೆಚ್ಚುವರಿ ಅಯೋಡಿನ್ ಥೈರೋಟಾಕ್ಸಿಕೋಸಿಸ್‌ಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ.

ಹೈಪೋಥೈರಾಯ್ಡಿಸಮ್ ನಿಂದ ಬಳಲುತ್ತಿರುವವರಿಗೆ ಆಗಾಗ್ಗೆ ಮಲಬದ್ಧತೆ ಸಮಸ್ಯೆ ಎದುರಾಗುತ್ತದೆ. ಈ ಸಮಸ್ಯ ನಿವಾರಣೆಗೆ ಫೈಬರ್ ಸಮೃದ್ಧವಾಗಿರುವ ಆಹಾರ ಸೇವನೆ ಮಾಡುವಂತ ಸಲಹೆ ನೀಡಲಾಗುತ್ತದೆ, ಸಾಕಷ್ಟು ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳು, ಬೆಣ್ಣೆಹಣ್ಣು, ಡ್ರೈಫ್ಲೂಟ್ಸ್, ಮೀನು, ಮೊಟ್ಟೆ ಸೇವನೆ ಮಾಡುವಂತೆ ಸಲಹೆ ನೀಡಲಾಗುತ್ತದೆ. ಎಲೆಕೋಸು, ಗಡ್ಡೆ ಕೋಸು ಮತ್ತು ಹೂಕೋಸುಗಳಂತಹ ತರಕಾರಿಗಳ ಸೇವನೆಯನ್ನು ನಿಯಂತ್ರಿಸಬೇಕು. ಹೈಪೋಥೈರಾಯ್ಡಿಸಮ್ಗೆ ಚಿಕಿತ್ಸೆ ಪಡೆಯುತ್ತಿರುವವರು ಈ ತರಕಾರಿ ಸೇವನೆಯನ್ನು ಸಂಪೂರ್ಣವಾಗಿ ನಿಯಂತ್ರಿಸುವಂತೆ ಸಲಹೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ರಾಮಯ್ಯ ಸ್ಮಾರಕ ಆಸ್ಪತ್ರೆಯ ಎಂಡೋಕ್ರೈನಾಲಜಿ ವಿಭಾಗದ ಎಚ್‌ಒಡಿ ಮತ್ತು ಸಲಹೆಗಾರರಾದ ಡಾ ಪ್ರಮೀಳಾ ಕಲ್ರಾ ಅವರು ಮಾತನಾಡಿ, ಗರ್ಭಿಣಿಯರು ಸಮತೋಲಿತ ಆಹಾರ ಸೇವನೆ ಮಾಡಬೇಕು. ಇಲ್ಲದಿದ್ದರೆ, ಮಗುವಿನ ಮೆದುಳಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.


Share