ರಾಜ್ಯದ ಯಾವೊಬ್ಬ ನಾಯಕನೂ ಪ್ರಧಾನಿಯಾಗುವ ಸಾಮರ್ಥ್ಯ ಹೊಂದಿಲ್ಲ ಎಂದು ಹೇಳಿಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

ರಾಜ್ಯದ ಯಾವೊಬ್ಬ ನಾಯಕನೂ ಪ್ರಧಾನಿಯಾಗುವ ಸಾಮರ್ಥ್ಯ ಹೊಂದಿಲ್ಲ ಎಂದು ಹೇಳಿಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

Share

ಬೆಂಗಳೂರು: ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮುಂದಿನ ಪ್ರಧಾನಿ ಯಾರು ಎನ್ನುವ ಚರ್ಚೆ ರಾಜ್ಯ ಕಾಂಗ್ರೆಸ್ಸಿನಲ್ಲಿ ಜೋರಾಗಿ ನಡೆಯುತ್ತಿದೆ. ಕರ್ನಾಟಕದಿಂದ ಯಾವೊಬ್ಬ ನಾಯಕನೂ ಪ್ರಧಾನಿ ಹುದ್ದೆಗೆ ಅರ್ಹರಾಗಿಲ್ಲ ಎಂದು ನಾನು ಹೇಳಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಸ್ಪಷ್ಟಪಡಿಸಿದ್ದಾರೆ.

ರಾಜ್ಯ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ಪ್ರಧಾನ ಮಂತ್ರಿ ಅಭ್ಯರ್ಥಿ ರೇಸ್‌ನಲ್ಲಿ ಕರ್ನಾಟಕದಿಂದ ಯಾರೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಸಿಎಂ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಹುದ್ದೆಯ ಸ್ಪರ್ಧೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಳ್ಳಿಹಾಕಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಇದೀಗ ತಮ್ಮ ಹೇಳಿಕೆಗೆ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ, ಕರ್ನಾಟಕದಿಂದ ಯಾರೂ ಪ್ರಧಾನಿಯಾಗುವುದಿಲ್ಲ ಎಂದು ನಾನು ಎಂದಿಗೂ ಹೇಳಿಲ್ಲ. ಮಾಧ್ಯಮ ಪ್ರತಿನಿಧಿಯೊಬ್ಬರು ನನ್ನನ್ನು ಪ್ರಧಾನ ಮಂತ್ರಿಯಾಗುವಿರಾ ಎಂದು ಕೇಳಿದರು, ಅದಕ್ಕೆ ನಾನು ಸಿಎಂ ಆಗಿರುವುದು ಸಂತೋಷವಾಗಿದೆ ಮತ್ತು ಕೇಂದ್ರಕ್ಕೆ ಹೋಗಲು ಆಸಕ್ತಿ ಇಲ್ಲ ಎಂದಿದ್ದೇನೆ. ಆದರೆ ಮಾಧ್ಯಮಗಳು ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿವೆ ಮತ್ತು ತಪ್ಪಾಗಿ ಬಿಂಬಿಸಿವೆ. ರಾಜ್ಯದಲ್ಲಿ ಪ್ರಧಾನಿಯಾಗುವ ಸಾಮರ್ಥ್ಯವಿರುವ ಹಲವಾರು ನಾಯಕರು ಇದ್ದಾರೆ ಎಂದು ನಾನು ಬಲವಾಗಿ ಭಾವಿಸುತ್ತೇನೆ ಎಂದು ಹೇಳಿದರು.

ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆಯವರು ಎಐಸಿಸಿಯ ಅಧ್ಯಕ್ಷರಾಗಲಿಲ್ಲವೇ? ಪ್ರಧಾನಿ ಹುದ್ದೆಗೆ ನಮ್ಮಲ್ಲಿ ಯಾರೂ ಇಲ್ಲ ಎನ್ನುವ ಮಾತನ್ನು ನಾನು ಒಪ್ಪುವುದಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದರು.

ಕಾನೂನು, ಸಂಸದೀಯ ವ್ಯವಹಾರ ಖಾತೆಯ ಸಚಿವ ಎಚ್‌ಕೆ ಪಾಟೀಲ್ ಮಾತನಾಡಿ, ಈಗಾಗಲೇ ಐದು ಹಂತದಲ್ಲಿ ಲೋಕಸಭೆ ಚುನಾವಣೆ ನಡೆದಿದೆ. ಎರಡು ಹಂತ ಬಾಕಿಯಿದೆ. ದೇಶದಲ್ಲಿ ಇಂಡಿಯಾ ಮೈತ್ರಿಕೂಟದ ಸರ್ಕಾರ ಸ್ಥಾಪನೆಯಾಗಲಿದೆ. ನಮ್ಮಲ್ಲೂ ಪ್ರಧಾನಿಯಾಗುವಂತಹ ಸಮರ್ಥ ನಾಯಕರು ಇದ್ದಾರೆ ಎಂದು ಹೇಳಿದ್ದರು.


Share