ಐಪಿಎಲ್ 2024ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ತನ್ನ ಅಭಿಯಾನವನ್ನು ಕೊನೆಗೊಳಿಸಿದ್ದು, 17ನೇ ವರ್ಷವೂ ಟ್ರೋಫಿ ತಂಡಕ್ಕೆ ದೊರಕಿಲ್ಲ. ಈ ಆವೃತ್ತಿಯ ಆರಂಭದಲ್ಲಿ ಇನ್ನೇನು ಟೂರ್ನಿಯಿಂದ ಹೊರಬಿತ್ತು ಎಂದೇ ಹೇಳಲಾಗಿದ್ದ ಸಮಯದಲ್ಲಿ ಸತತ 6 ಗೆಲುವಿನ ಮೂಲಕ ಪ್ಲೇಆಫ್‌ಗೆ ಆಯ್ಕೆಯಾಗಿದ್ದ ಆರ್‌ಸಿಬಿ, ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 4 ವಿಕೆಟ್ ಅಂತರದಿಂದ ಸೋತು ಟೂರ್ನಿಯಿಂದ ಹೊರಗುಳಿಯಿತು.
ವಿರಾಟ್ ಕೊಹ್ಲಿ ಮತ್ತೊಂದು ಆವೃತ್ತಿಯಲ್ಲಿಯೂ ಟ್ರೋಫಿ ಬರ ಎದುರಿಸುತ್ತಿದ್ದು, ಮಾಜಿ ಇಂಗ್ಲೆಂಡ್ ನಾಯಕ ಕೆವಿನ್ ಪೀಟರ್ಸನ್, ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರನ್ನು ಆರ್‌ಸಿಬಿಯನ್ನು ತೊರೆಯುವಂತೆ ಮತ್ತು ತನ್ನ ತವರು ಪ್ರಾಂಚೈಸಿಯಾದ ಡೆಲ್ಲಿ ಕ್ಯಾಪಿಟಲ್ಸ್ ಸೇರುವಂತೆ ಸಲಹೆ ನೀಡಿದ್ದಾರೆ.
ಈ ಆವೃತ್ತಿಯಲ್ಲಿ ಆಡಿರುವ 15 ಪಂದ್ಯಗಳಲ್ಲಿ 741 ರನ್ ಗಳಿಸಿರುವ ಕೊಹ್ಲಿ ಆರೆಂಜ್ ಕ್ಯಾಪ್ ಅನ್ನು ಹೊಂದಿದ್ದಾರೆ. ಈ ಆವೃತ್ತಿಯಲ್ಲಿ ಕೊಹ್ಲಿ ಉತ್ತಮ ಪ್ರದರ್ಶನ ತೋರಿದ್ದರೂ, ತಂಡದ ಇತರ ಆಟಗಾರರಿಂದ ಅವರಿಗೆ ಸರಿಯಾದ ಬೆಂಬಲ ಸಿಕ್ಕಿಲ್ಲ. ಆರ್‌ಸಿಬಿ ಬೌಲಿಂಗ್ ಘಟಕ ಸಹ ಅಷ್ಟೇನು ಉತ್ತಮ ಪ್ರದರ್ಶನ ನೀಡಿಲ್ಲ.
‘ನಾನು ಇದನ್ನು ಮೊದಲೇ ಹೇಳಿದ್ದೇನೆ. ಮತ್ತೊಮ್ಮೆ ಅದನ್ನೇ ಹೇಳುತ್ತೇನೆ. ಇತರ ಕ್ರೀಡೆಗಳಲ್ಲಿನ ಶ್ರೇಷ್ಠ ಆಟಗಾರರು, ಬೇರೆಡೆಗೆ ಹೋಗಿ ಕೀರ್ತಿಯನ್ನು ಹುಡುಕಲು ತಂಡಗಳನ್ನು ತೊರೆದಿದ್ದಾರೆ. ಅವರು ಪ್ರಯತ್ನಿಸಿದಾಗ ಮತ್ತೊಮ್ಮೆ ಆರೆಂಜ್ ಕ್ಯಾಪ್ ಪಡೆದಿದ್ದಾರೆ ಮತ್ತು ಇನ್ನೂ ಹೆಚ್ಚಿನದನ್ನು ಮಾಡಿದ್ದಾರೆ. ಆದರೆ, ಫ್ರಾಂಚೈಸಿ ಮತ್ತೆ ವಿಫಲವಾಗಿದೆ. ತಂಡದ ಬ್ರ್ಯಾಂಡ್ ಮತ್ತು ಅವರು ತಂಡಕ್ಕೆ ತಂದಿರುವ ವಾಣಿಜ್ಯಿಕ ಮೌಲ್ಯವನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ, ವಿರಾಟ್ ಕೊಹ್ಲಿ ಟ್ರೋಫಿಗೆ ಅರ್ಹರಾಗಿದ್ದಾರೆ. ಅವರು ಆ ಟ್ರೋಫಿಯನ್ನು ಪಡೆಯಲು ಅದಕ್ಕಾಗಿ ಸಹಾಯ ಮಾಡುವ ತಂಡದಲ್ಲಿ ಅವರು ಆಡಬೇಕು’ ಎಂದು ಪೀಟರ್ಸನ್ ಹೇಳಿದ್ದಾರೆ.ಕೊಹ್ಲಿ ಯಾವ ಫ್ರಾಂಚೈಸಿಯನ್ನು ಸೇರಬೇಕು ಎಂಬುದರ ಕುರಿತು ಮಾತನಾಡುತ್ತಾ ಪೀಟರ್ಸನ್, ವಿಶೇಷವಾಗಿ ಆರ್‌ಸಿಬಿ ಸ್ಟಾರ್ ಬ್ಯಾಟರ್ ದೆಹಲಿ ಹುಡುಗನಾಗಿರುವುದರಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರುವಂತೆ ಹೇಳಿದರು.
‘ವಾಸ್ತವವಾಗಿ ಕೊಹ್ಲಿ ಆಡುವ ತಂಡ ದೆಹಲಿಯಾಗಿರಬೇಕು ಎಂದು ನಾನು ಭಾವಿಸುತ್ತೇನೆ. ದೆಹಲಿಯು ವಿರಾಟ್ ಹೋಗಬೇಕಾದ ಸ್ಥಳವಾಗಿದೆ. ವಿರಾಟ್ ದೂರ ಹೋಗಬಹುದು ಮತ್ತು ಹೆಚ್ಚಿನ ಸಮಯ ಮನೆಯಲ್ಲಿಯೇ ಇರಬಹುದು. ನನಗೆ ಗೊತ್ತು ಅವರು ದೆಹಲಿಯಲ್ಲಿ ಮನೆ ಹೊಂದಿದ್ದಾರೆ. ಅವರು ದೆಹಲಿಯವರು. ಹೀಗಾಗಿ, ಅವರು ಏಕೆ ಹಿಂತಿರುಗಬಾರದು? ಬೆಂಗಳೂರಿಗಿಂತ ದೆಹಲಿಯಲ್ಲಿ ಆಡುವುದು ಉತ್ತಮ ಎಂದಿದ್ದಾರೆ.
ವಿರಾಟ್ ದೀರ್ಘ ಮತ್ತು ಕಠಿಣವಾಗಿ ಯೋಚಿಸುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ. ಬೆಕ್‌ಹ್ಯಾಮ್ ತೊರೆದರು, ರೊನಾಲ್ಡೊ ತೊರೆದರು, ಮೆಸ್ಸಿ ತೊರೆದರು, ಹ್ಯಾರಿ ಕೇನ್ ಸ್ಪರ್ಸ್ ಅನ್ನು ತೊರೆದು ಬೇಯರ್ನ್ ಮ್ಯೂನಿಚ್‌ಗೆ ಹೋದರು ಎಂದು ಹೇಳಿದರು.