ಮುಂಬೈ: ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್ ಬಳಿಕ ರಾಹುಲ್ ದ್ರಾವಿಡ್ ನಿರ್ಗಮನದಿಂದ ತೆರವಾಗಲಿರುವ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಯ ಜವಾಬ್ದಾರಿ ವಹಿಸಿಕೊಳ್ಳಲು ಮಂಡಳಿಯು ಯಾವುದೇ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರನ್ನು ಸಂಪರ್ಕಿಸಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಶುಕ್ರವಾರ ಹೇಳಿದ್ದಾರೆ.
ಮೂರನೇ ಬಾರಿಗೆ ಮುಖ್ಯ ಕೋಚ್ ಹುದ್ದೆಯಲ್ಲಿ ಮುಂದುವರಿಯಲು ತಾವು ಆಸಕ್ತಿ ಹೊಂದಿಲ್ಲ ಎಂದು ದ್ರಾವಿಡ್ ಬಿಸಿಸಿಐಗೆ ತಿಳಿಸಿದ್ದರೆ, ರಿಕಿ ಪಾಂಟಿಂಗ್ ಮತ್ತು ಜಸ್ಟಿನ್ ಲ್ಯಾಂಗರ್ ಅವರಂತಹ ಆಸ್ಟ್ರೇಲಿಯಾದ ಮಾಜಿ ಆಟಗಾರರು ಮುಖ್ಯ ಕೋಚ್ ಹುದ್ದೆಯನ್ನು ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ.
‘ನಾನಾಗಲೀ ಅಥವಾ ಬಿಸಿಸಿಐ ಆಗಲಿ ಯಾವುದೇ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರನ್ನು ಮುಖ್ಯ ಕೋಚ್ ಹುದ್ದೆಗೆ ಸಂಪರ್ಕಿಸಿಲ್ಲ. ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗುವ ವರದಿಗಳು ಸಂಪೂರ್ಣವಾಗಿ ತಪ್ಪಾಗಿದೆ’ ಎಂದು ಶಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪಾಂಟಿಂಗ್ ಮತ್ತು ಲ್ಯಾಂಗರ್ ಇಬ್ಬರೂ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಕ್ರಮವಾಗಿ ದೆಹಲಿ ಕ್ಯಾಪಿಟಲ್ಸ್ (ಡಿಸಿ) ಮತ್ತು ಲಕ್ನೋ ಸೂಪರ್ ಜೈಂಟ್ಸ್‌ನ (ಎಲ್ಎಸ್‌ಜಿ) ಮುಖ್ಯ ತರಬೇತುದಾರರಾಗಿ ತೊಡಗಿಸಿಕೊಂಡಿದ್ದಾರೆ.’ನಮ್ಮ ರಾಷ್ಟ್ರೀಯ ತಂಡಕ್ಕೆ ಸರಿಯಾದ ತರಬೇತುದಾರರನ್ನು ಹುಡುಕುವುದು ಒಂದು ನಿಖರವಾದ ಮತ್ತು ಸಂಪೂರ್ಣ ಪ್ರಕ್ರಿಯೆಯಾಗಿದೆ. ನಾವು ಭಾರತೀಯ ಕ್ರಿಕೆಟ್ ರಚನೆಯ ಬಗ್ಗೆ ಆಳವಾದ ತಿಳುವಳಿಕೆ ಹೊಂದಿರುವ ಮತ್ತು ಶ್ರೇಯಾಂಕಗಳ ಮೂಲಕ ಉನ್ನತ ಮಟ್ಟಕೇರಿದ ವ್ಯಕ್ತಿಗಳನ್ನು ಗುರುತಿಸುವತ್ತ ಗಮನಹರಿಸಿದ್ದೇವೆ’ ಎಂದಿರುವ ಅವರು ದ್ರಾವಿಡ್ ಅವರ ಉತ್ತರಾಧಿಕಾರಿಯು ಭಾರತೀಯರೇ ಆಗರಿಬೇಕೆಂಬ ಸುಳಿವು ನೀಡಿದರು.
ಭಾರತೀಯ ದೇಶೀಯ ಕ್ರಿಕೆಟ್‌ನ ಆಳವಾದ ಜ್ಞಾನವನ್ನು ಹೊಂದಿರುವುದು ಮುಂದಿನ ಭಾರತದ ಕ್ರಿಕೆಟ್ ತಂಡದ ಮುಖ್ಯ ಕೋಚ್‌ನ ನೇಮಕಕ್ಕೆ ಪ್ರಮುಖ ಮಾನದಂಡಗಳಲ್ಲಿ ಒಂದಾಗಿದೆ. ಟೀಂ ಇಂಡಿಯಾವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಈ ತಿಳುವಳಿಕೆ ನಿರ್ಣಾಯಕವಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಹೇಳಿದ್ದಾರೆ.
ಇದೀಗ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾರ್ಗದರ್ಶಕರಾಗಿರುವ ಮಾಜಿ ಬ್ಯಾಟರ್ ಗೌತಮ್ ಗಂಭೀರ್ ಅವರು ಈ ಹುದ್ದೆಗೆ ಪ್ರಮುಖ ಸ್ಪರ್ಧಿಗಳಲ್ಲಿ ಒಬ್ಬರು ಎನ್ನುವ ಮಾತುಗಳು ಕೇಳಿಬರುತ್ತಿವೆ.