ಹಾರ್ದಿಕ್ ಪಾಂಡ್ಯ ದಾಂಪತ್ಯದಲ್ಲಿ ಬಿರುಕು; ಮತ್ತೆ ಸಂಕಷ್ಟಕ್ಕೆ ಸಿಲುಕಿದ ಟೀಂ ಇಂಡಿಯಾ ಆಲ್‌ರೌಂಡರ್!

ಹಾರ್ದಿಕ್ ಪಾಂಡ್ಯ ದಾಂಪತ್ಯದಲ್ಲಿ ಬಿರುಕು; ಮತ್ತೆ ಸಂಕಷ್ಟಕ್ಕೆ ಸಿಲುಕಿದ ಟೀಂ ಇಂಡಿಯಾ ಆಲ್‌ರೌಂಡರ್!

Share

ಮುಂಬೈ: ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ಅವರ ಪತ್ನಿ ನತಾಶಾ ಸ್ಟಾಂಕೋವಿಕ್ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿದ್ದು, ಅವರಿಬ್ಬರು ಬೇರೆಯಾಗಿದ್ದಾರೆ ಎನ್ನುವ ಮಾತುಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ದಂಪತಿ 2020ರ ಮೇನಲ್ಲಿ ವಿವಾಹವಾದರು ಮತ್ತು 2020ರ ಜುಲೈನಲ್ಲಿ ಮೊದಲ ಮಗು ಅಗಸ್ತ್ಯ ಜನಿಸಿದನು.

ಸಾಮಾಜಿಕ ಮಾಧ್ಯಮದ ಬಳಕೆದಾರರು ತಮ್ಮ ಪೋಸ್ಟ್‌ನಲ್ಲಿ ಇಬ್ಬರು ಬೇರ್ಪಟ್ಟಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ ಮತ್ತು ಅದು ಕೇವಲ ಊಹಾಪೋಹ ಎಂದೂ ಹೇಳಿದ್ದಾರೆ.

ನತಾಶಾ ಅವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ನತಾಶಾ ಸ್ಟಾಂಕೋವಿಕ್ ಪಾಂಡ್ಯ ಎಂದು ಹೆಸರನ್ನು ಹೊಂದಿದ್ದರು. ಆದರೆ, ಇದೀಗ ಪಾಂಡ್ಯ ಅವರ ಹೆಸರನ್ನು ತೆಗೆದುಹಾಕಿದ್ದಾರೆ. ಮಾರ್ಚ್ 4 ರಂದು ನತಾಶಾ ಅವರ ಹುಟ್ಟುಹಬ್ಬವಿತ್ತು ಮತ್ತು ಆ ದಿನ ಹಾರ್ದಿಕ್ ಕೂಡ ಯಾವುದೇ ಪೋಸ್ಟ್ ಹಾಕಿಲ್ಲ. ನತಾಶಾ ಅವರು ಅಗಸ್ತ್ಯನೊಂದಿಗೆ ಇರುವ ಪೋಸ್ಟ್ ಹೊರತುಪಡಿಸಿ ತನ್ನ ಮತ್ತು ಹಾರ್ದಿಕ್ ಜೊತೆಗಿರುವ ಇತ್ತೀಚಿನ ಎಲ್ಲ ಪೋಸ್ಟ್‌ಗಳನ್ನು ತೆಗೆದುಹಾಕಿದ್ದಾರೆ ಎಂದು ಹೇಳಲಾಗಿದೆ.

ಈ ಐಪಿಎಲ್ 2024ನೇ ಆವೃತ್ತಿಯಲ್ಲಿ ನತಾಶಾ ಅವರು ಪಂದ್ಯ ವೀಕ್ಷಿಸಲು ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿಲ್ಲ ಮತ್ತು ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡದ (ಮುಂಬೈ ಇಂಡಿಯನ್ಸ್) ಬಗ್ಗೆ ಅವರು ಯಾವುದೇ ಪೋಸ್ಟ್ ಮಾಡಿಲ್ಲ ಎಂದು ರೆಡ್ಡಿಟ್ ಬಳಕೆದಾರರು ಗಮನಸೆಳೆದಿದ್ದಾರೆ.

ಆದಾಗ್ಯೂ, ಹಾರ್ದಿಕ್ ಅವರ ಸಹೋದರ ಕೃನಾಲ್ ಮತ್ತು ಪತ್ನಿ ಪಂಖುರಿ ಶರ್ಮಾ ಅವರು ನತಾಶಾ ಅವರ ಪೋಸ್ಟ್‌ಗಳಿಗೆ ಇನ್ನೂ ಕಾಮೆಂಟ್ ಮಾಡುತ್ತಿದ್ದಾರೆ. ಆದರೆ, ಹಾರ್ದಿಕ್ ಮತ್ತು ನತಾಶಾ ನಡುವೆ ಬಿರುಕು ಮೂಡಿರುವುದು ನಿಜ ಎಂದು ಕೆಲವರು ಹೇಳುತ್ತಿದ್ದಾರೆ.ರೋಹಿತ್ ಶರ್ಮಾರನ್ನು ನಾಯಕ ಸ್ಥಾನದಿಂದ ಕೆಳಗಿಳಿಸಿ ತಾವೇ ತಂಡ ಮುನ್ನಡೆಸಿದ್ದ ಹಾರ್ದಿಕ್ ಪಾಂಡ್ಯ ಅವರು ಅಭಿಮಾನಿಗಳಿಂದ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ತಂಡವು ಈ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿದ ನಂತರ, ಹಾರ್ದಿಕ್ ಪಾಂಡ್ಯ ಅವರ ಪತ್ನಿ ನತಾಶಾ ಸ್ಟಾಂಕೋವಿಕ್ ಅವರನ್ನು ಟ್ರೋಲರ್ಸ್‌ಗಳು ಗುರಿಯಾಗಿಸಿಕೊಂಡಿದ್ದರು.

ಟ್ರೋಲಿಂಗ್‌ನಿಂದಾಗಿಯೂ ನತಾಶಾ ಅವರ ಪೋಸ್ಟ್‌ಗಳು ಕಡಿಮೆಯಾಗಿರಬಹುದು ಎಂದು ಕೆಲವರು ಶಂಕಿಸಿದ್ದಾರೆ. ನತಾಶಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಾರ್ದಿಕ್ ಅವರೊಂದಿಗಿನ ಎಲ್ಲ ಪೋಸ್ಟ್‌ಗಳನ್ನು ತೆಗೆದುಹಾಕಿಲ್ಲ. ಇನ್ನು ಕೆಲವು ಪೋಸ್ಟ್‌ಗಳು ಹಾಗೇ ಇದ್ದು, ಅವರಿಬ್ಬರ ನಡುವೆ ಎಲ್ಲವೂ ಚೆನ್ನಾಗಿದೆ. ಮುಂಬೈ ಇಂಡಿಯನ್ಸ್ ನಾಕತ್ವದ ವಿಚಾರವಾಗಿ ಟ್ರೋಲ್ ಜಾಸ್ತಿಯಾಗಿದ್ದರಿಂದ ಹಾರ್ದಿಕ್ ಅವರೇ ನತಾಶಾ ಅವರಿಗೆ ಇದರಿಂದ ದೂರ ಉಳಿಯುವಂತೆ ಹೇಳಿದ್ದಾರೆ ಎಂದೂ ಕೆಲವರು ಕಮೆಂಟ್ ಮಾಡಿದ್ದಾರೆ.

ಆದರೆ, ಕೆಲವರು ಹಾರ್ದಿಕ್ ನತಾಶಾಗೆ ಮೋಸ ಮಾಡಿದ್ದಾರೆ. ಹೀಗಾಗಿ ಇಬ್ಬರೂ ಅಂತರ ಕಾಯ್ದುಕೊಂಡಿದ್ದಾರೆ ಎಂದಿದ್ದಾರೆ.


Share