ಹೈದರಾಬಾದ್: ನಾಗ ಅಶ್ವಿನ್ ನಿರ್ದೇಶನದ ‘ಕಲ್ಕಿ 2898 AD’ ತನಗೆ ಅದೃಷ್ಟದ ಯೋಜನೆಯಾಗಿದೆ. ಈ ಸಿನಿಮಾ ಭಾರತೀಯ ಚಿತ್ರರಂಗದ ಇಬ್ಬರು ದಿಗ್ಗಜರಾದ ಅಮಿತಾಬ್ ಬಚ್ಚನ್ ಮತ್ತು ಕಮಲ್ ಹಾಸನ್ ಅವರೊಂದಿಗೆ ಕೆಲಸ ಮಾಡುವ ಅವಕಾಶ ನೀಡಿದೆ ಎಂದು ನಟ ಪ್ರಭಾಸ್ ಸಂತಸ ವ್ಯಕ್ತಪಡಿಸಿದ್ದಾರೆ.
2020 ರಲ್ಲಿ ‘Project K’ ಎಂದು ಹೆಸರಿಟ್ಟು ಸೆಟ್ಟೇರಿದ ಈ ಬಹುಭಾಷಾ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಮತ್ತು ಕಮಲ್ ಹಾಸನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ವೈಜಯಂತಿ ಮೂವೀಸ್‌ನ ಸಂಸ್ಥಾಪಕ ಅಶ್ವಿನಿ ದತ್ ನಿರ್ಮಿಸಿದ್ದಾರೆ.
‘ಅಮಿತಾಬ್ ಸರ್ ಮತ್ತು ಕಮಲ್ ಸರ್ ಅವರು ‘ಕಲ್ಕಿ 2898 AD’ ಸಿನಿಮಾದ ಭಾಗವಾಗಲು ಒಪ್ಪಿಕೊಂಡಿದ್ದಕ್ಕೆ ನಾನು ಅವರಿಗೆ ಕೃತಜ್ಞನಾಗಿದ್ದೇನೆ. ಈ ಇಬ್ಬರೂ ಮೇರು ನಟರು ಇಡೀ ಭಾರತಕ್ಕೆ ಸ್ಫೂರ್ತಿ ನೀಡಿದ್ದಾರೆ. ಈ ಇಬ್ಬರು ದಂತಕಥೆಗಳೊಂದಿಗೆ ನಟಿಸಲು ನಾನು ತುಂಬಾ ಅದೃಷ್ಟಶಾಲಿ’ ಎಂದು ಪ್ರಭಾಸ್ ಹೇಳಿದ್ದಾರೆ.
ಉತ್ತರ ಭಾರತದ ಅಮಿತಾಬ್ ಸರ್ ದಕ್ಷಿಣದಲ್ಲಿಯೂ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ ಮತ್ತು ನಾವೆಲ್ಲರೂ ಅವರ ಬಗ್ಗೆ ಹೆಮ್ಮೆಪಡಬೇಕು. ಕಮಲ್ ಸರ್ ಕೂಡ ದೊಡ್ಡ ಸ್ಟಾರ್ ಆಗಿದ್ದಾರೆ. ಅವರಿಬ್ಬರೂ ದೇಶದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ ಎಂದು ಪ್ರಭಾಸ್ ಬುಧವಾರ ರಾತ್ರಿ ಇಲ್ಲಿ ನಡೆದ ‘ಕಲ್ಕಿ 2898 AD’ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಹೇಳಿದರು.44 ವರ್ಷದ ನಟ ತಮ್ಮ ಬಾಲ್ಯದಲ್ಲಿ ಸಿನಿಮಾಗಳಲ್ಲಿ ಬರುವ ಕಮಲ್ ಹಾಸನ್ ಪಾತ್ರಗಳಂತೆ ಡ್ರೆಸ್ ಮಾಡುತ್ತಿದ್ದೆ ಎಂದು ನೆನಪಿಸಿಕೊಳ್ಳುತ್ತಾರೆ. ನನ್ನ ಬಾಲ್ಯದ ದಿನಗಳಲ್ಲಿ ಕಮಲ್ ಸರ್ ಅವರಂತೆ ನನ್ನನ್ನು ನಾನು ರೂಪಿಸಿಕೊಂಡೆ ಮತ್ತು 1983ರ ಚಲನಚಿತ್ರ ‘ಸಾಗರ ಸಂಗಮಂ’ನಲ್ಲಿ ಅವರು ಧರಿಸಿದ್ದಂತೆ ನನ್ನ ಬಟ್ಟೆಗಳನ್ನು ಹೊಲಿಸಿಕೊಳ್ಳಲು ಪ್ರಯತ್ನಿಸಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಚಿತ್ರತಂಡ ‘Bujji’ ಅನ್ನು ಪರಿಚಯಿಸಿತು. ಈ ಫ್ಯೂಚರಿಸ್ಟಿಕ್ ಕಾರನ್ನು ಕಲ್ಕಿ 2898 AD ಚಿತ್ರದಲ್ಲಿ ನಟ ಪ್ರಭಾಸ್ ಚಾಲನೆ ಮಾಡಿದ್ದಾರೆ. 15,000ಕ್ಕೂ ಹೆಚ್ಚು ಅಭಿಮಾನಿಗಳು ಭಾಗವಹಿಸಿದ್ದ ಕಾರ್ಯಕ್ರಮಕ್ಕೆ ಕಸ್ಟಮೈಸ್ ಮಾಡಿದ ಕಾರಿನಲ್ಲಿ ನಟ ಆಗಮಿಸಿದರು.
ಕಲ್ಕಿ 2898 AD ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ಕೂಡ ನಟಿಸಿದ್ದು, ಚಿತ್ರದ ಭಾಗವಾಗಿರುವುದಕ್ಕೆ ಪ್ರಭಾಸ್ ಇಬ್ಬರಿಗೂ ಕೃತಜ್ಞತೆ ಸಲ್ಲಿಸಿದರು.
ದೀಪಿಕಾ ಅತ್ಯಂತ ಸುಂದರ ಸೂಪರ್‌ಸ್ಟಾರ್ ಆಗಿದ್ದಾರೆ. ಈ ಚಿತ್ರದಲ್ಲಿ ಅವರನ್ನು ಹೊಂದಿರುವುದಕ್ಕೆ ನಾವು ಅದೃಷ್ಟವಂತರು. ಹೆಚ್ಚಿನ ಬಜೆಟ್‌ನಲ್ಲಿ ಕಲ್ಕಿ 2898 AD ಚಿತ್ರವನ್ನು ನಿರ್ಮಿಸಿರುವ ನಿರ್ಮಾಪಕ ದತ್ ಅವರ ಉತ್ಸಾಹ ಮತ್ತು ಧೈರ್ಯವನ್ನು ತಾನು ಮೆಚ್ಚುತ್ತೇನೆ ಎಂದು ಹೇಳಿದರು.
ಕಲ್ಕಿ 2898 AD ಜೂನ್ 27 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.