35 ಎಕರೆ ಗೋಮಾಳ ಒತ್ತುವರಿ: ರಾಜ್ಯ ಸರ್ಕಾರಕ್ಕೆ ‘ಹೈ’ ನೋಟಿಸ್‌

35 ಎಕರೆ ಗೋಮಾಳ ಒತ್ತುವರಿ: ರಾಜ್ಯ ಸರ್ಕಾರಕ್ಕೆ ‘ಹೈ’ ನೋಟಿಸ್‌

Share

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಮಜರಾ ಹೊಸಹಳ್ಳಿ ಗ್ರಾಮದಲ್ಲಿ ಖಾಸಗಿ ವ್ಯಕ್ತಿಗಳು ಸುಮಾರು 35 ಎಕರೆ ಗೋಮಾಳ ಜಮೀನು ಒತ್ತುವರಿ ಮಾಡಿದ್ದು, ಅದನ್ನು ತೆರವುಗೊಳಿಸಲು ಆದೇಶಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಗುರುವಾರ ಹೈಕೋರ್ಟ್‌ ನೋಟಿಸ್ ಜಾರಿಗೊಳಿಸಿದೆ.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಮನ್ವಯಕಾರ ರಾಮು ನೇರಳಘಟ್ಟ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಸ್ ಆರ್ ಕೃಷ್ಣ ಕುಮಾರ್ ಮತ್ತು ರಾಮಚಂದ್ರ ಹುದ್ದಾರ್‌ ಅವರ ನೇತೃತ್ವದ ರಜಾಕಾಲೀನ ವಿಭಾಗೀಯ ಪೀಠ ನಡೆಸಿತು.

ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ರಾಜ್ಯ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ, ದೊಡ್ಡಬಳ್ಳಾಪುರ ಪಟ್ಟಣದ ಉಪ ವಿಭಾಗಾಧಿಕಾರಿ, ದೊಡ್ಡಬಳ್ಳಾಪುರ ತಾಲ್ಲೂಕು ತಹಸೀಲ್ದಾರ್‌ಗೆ ಪೀಠವು ನೋಟಿಸ್‌ ಜಾರಿಗೊಳಿಸಿ ವಿಚಾರಣೆಯನ್ನು ಜೂನ್‌ 10ಕ್ಕೆ ಮುಂದೂಡಿದೆ.ಅರ್ಜಿದಾರರ ಪರ ವಕೀಲರು, ಮಜರಾ ಹೊಸಹಳ್ಳಿ ಗ್ರಾಮದಲ್ಲಿ ಸರ್ವೇ ನಂ. 57ರಲ್ಲಿನ 6 ಎಕರೆ 12 ಗುಂಟೆ, ಸರ್ವೇ ನಂ.58ರಲ್ಲಿನ 28 ಎಕರೆ 10 ಗುಂಟೆ ಮತ್ತು ಸರ್ವೇ ನಂ.60ರಲ್ಲಿನ ಗುಂಟೆ ಜಾಗವು ಸರ್ಕಾರಿ ಗೋಮಾಳವಾಗಿದೆ. ಇದನ್ನು ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಜಾಗದ ಸುತ್ತಲೂ ತಡೆಗೋಡೆ ನಿರ್ಮಿಸಲಾಗಿದೆ. ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ, ಒತ್ತುವರಿ ತೆರವುಗೊಳಿಸಲು ಕೋರಿ ಜಿಲ್ಲಾಧಿಕಾರಿ, ಸಹಾಯಕ ಉಪವಿಭಾಗಾಧಿಕಾರಿ ಮತ್ತು ತಹಸೀಲ್ದಾರ್‌ ಅವರಿಗೆ ಸಾಕ್ಷ್ಯಧಾರಗಳ ಸಮೇತ ದೂರು ನೀಡಲಾಗಿತ್ತು. ಅದನ್ನು ಪರಿಗಣಿಸಿ ಅವರು ಈವರೆಗೂ ಒತ್ತುವರಿ ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ಪೀಠದ ಗಮನಕ್ಕೆ ತಂದರು.

ಅಲ್ಲದೇ, ಪ್ರಕರಣದಲ್ಲಿ ನಡೆದಿರುವ ಸರ್ಕಾರಿ ಜಮೀನಿನ ಒತ್ತುವರಿಯನ್ನು ತೆರವುಗೊಳಿಸುವ ಮೂಲಕ ಸರ್ಕಾರದ ಜಮೀನು ರಕ್ಷಣೆ ಮಾಡಬೇಕು ಮತ್ತು ಒತ್ತುವರಿದಾರರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದರು.


Share