ಕಲಬುರಗಿ: ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಪಡಿಸಲು ಕೆಲವು ವಿಧಾನಗಳನ್ನು ಅನುಸರಿಸಬೇಕಾಗಿದೆ ಮತ್ತು ಅವರನ್ನು ದೇಶಕ್ಕೆ ಕರೆತರುವಲ್ಲಿ ಕರ್ನಾಟಕ ಸರ್ಕಾರದೊಂದಿಗೆ ಸಹಕರಿಸಲು ಕೇಂದ್ರವು ಸಿದ್ಧವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಗುರುವಾರ ಹೇಳಿದರು.
ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳನ್ನು ಏಕಾಏಕಿ ರದ್ದುಗೊಳಿಸಲು ಸಾಧ್ಯವಾಗುವುದಿಲ್ಲ. ಆಪಾದಿತ ಲೈಂಗಿಕ ಕಿರುಕುಳ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಪ್ರಜ್ವಲ್ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸುವಂತೆ ಒತ್ತಾಯಿಸಿ ನ್ಯಾಯಾಲಯದ ಮೆಟ್ಟಿಲೇರಿದೆ. ಪ್ರಜ್ವಲ್ ವಿಚಾರಣೆ ಎದುರಿಸಬೇಕು ಮತ್ತು ತಪ್ಪಿತಸ್ಥರಾಗಿದ್ದರೆ ಶಿಕ್ಷೆಯಾಗಬೇಕು ಎಂದು ಅವರು ಹೇಳಿದರು.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಗೃಹ ಸಚಿವ ಡಾ. ಜಿ ಪರಮೇಶ್ವರ ಅವರ ನನ್ನ ಪ್ರಶ್ನೆಗಳಿಗೆ ಇನ್ನೂ ಉತ್ತರಿಸಿಲ್ಲ. ‘ಅಶ್ಲೀಲ ವಿಡಿಯೋಗಳಿದ್ದ ಮೊದಲ ಪೆನ್ ಡ್ರೈವ್ ಏಪ್ರಿಲ್ 21 ರಂದು ಹೊರಬಂದಿತು. ಪ್ರಜ್ವಲ್ ಏಪ್ರಿಲ್ 27 ರಂದು ವಿದೇಶಕ್ಕೆ ತೆರಳಿದರು. ಅಲ್ಲಿಯವರೆಗೆ ಅವರು (ರಾಜ್ಯ ಸರ್ಕಾರ) ಏನು ಮಾಡುತ್ತಿದ್ದರು?. ಒಕ್ಕಲಿಗ ಮತಗಳು ಕೈತಪ್ಪಿ ಹೋಗಬಹುದೆಂಬ ಭಯದಿಂದ ರಾಜ್ಯ ಸರ್ಕಾರ ಪ್ರಜ್ವಲ್ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾಗಿದೆ ಎಂದು ದೂರಿದರು.
ಟಿಎಂಸಿ ಆಡಳಿತದಲ್ಲಿ 2011ರಿಂದ ಪಶ್ಚಿಮ ಬಂಗಾಳದಲ್ಲಿ ಇತರ ಹಿಂದುಳಿದ ವರ್ಗಗಳಿಗೆ ನೀಡಲಾದ ಒಬಿಸಿ ಪ್ರಮಾಣಪತ್ರಗಳನ್ನು ರದ್ದುಗೊಳಿಸಿರುವ ಕಲ್ಕತ್ತಾ ಹೈಕೋರ್ಟಿನ ಆದೇಶವನ್ನು ‘ಒಪ್ಪಿಕೊಳ್ಳುವುದಿಲ್ಲ’ ಎಂದು ಹೇಳಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ ಜೋಶಿ, ಸಂವಿಧಾನದ ಪ್ರಕಾರ ನ್ಯಾಯಾಲಯಗಳನ್ನು ರಚಿಸಲಾಗಿರುವುದರಿಂದ ಟಿಎಂಸಿ ಮತ್ತು ಇಂಡಿಯಾ ಮೈತ್ರಿಕೂಟ ಸಂವಿಧಾನವನ್ನು ಎಷ್ಟರ ಮಟ್ಟಿಗೆ ಗೌರವಿಸುತ್ತದೆ ಎಂಬುದನ್ನು ಇದು ತೋರಿಸುತ್ತದೆ ಎಂದು ಅವರು ಹೇಳಿದರು.