ಢಾಕಾ: ಭಾರತದಲ್ಲಿ ನಾಪತ್ತೆಯಾಗಿದ್ದ ಬಾಂಗ್ಲಾದೇಶದ ಹಿರಿಯ ಸಂಸದ ಅನ್ವರುಲ್ ಅಜೀಂ ಅನಾರ್ ಅವರನ್ನು ಕೊಲ್ಕತ್ತಾದಲ್ಲಿ ಭೀಕರವಾಗಿ ಹತ್ಯೆ ಮಾಡಲಾಗಿದ್ದು, ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಅಸಾದುಝಮಾನ್ ಖಾನ್ ಅವರು ಬುಧವಾರ ಪ್ರಕಟಿಸಿದ್ದಾರೆ.
“ಭಾರತದಲ್ಲಿ ನಾಪತ್ತೆಯಾಗಿದ್ದ ಅವಾಮಿ ಲೀಗ್ ಸಂಸದ ಅನ್ವರುಲ್ ಅಜೀಂ ಅನಾರ್ ಅವರನ್ನು ಕೋಲ್ಕತ್ತಾದ ಫ್ಲಾಟ್‌ನಲ್ಲಿ ಕೊಲೆ ಮಾಡಲಾಗಿದೆ” ಎಂದು ಖಾನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
“ಇದುವರೆಗೆ, ಕೊಲೆಯಲ್ಲಿ ಭಾಗಿಯಾಗಿರುವ ಎಲ್ಲಾ ಹಂತಕರು ಬಾಂಗ್ಲಾದೇಶೀಯರು ಎಂದು ನಮಗೆ ತಿಳಿದು ಬಂದಿದೆ. ಇದು ಯೋಜಿತ ಕೊಲೆ” ಎಂದು ಅವರು ಹೇಳಿದ್ದಾರೆ.56 ವರ್ಷದ ಸಂಸದನ ಹತ್ಯೆಗೆ ಸಂಬಂಧಿಸಿದಂತೆ ಬಾಂಗ್ಲಾದೇಶ ಪೊಲೀಸರು ಮೂವರನ್ನು ಬಂಧಿಸಿದ್ದಾರೆ ಎಂದು ಸಚಿವರು ಹೇಳಿರುವುದಾಗಿ ದಿ ಡೈಲಿ ಸ್ಟಾರ್ ವರದಿ ಮಾಡಿದೆ.
ಮೃತದೇಹ ಎಲ್ಲಿದೆ ಎಂದು ವಿಚಾರಿಸಿದಾಗ ಈ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ ಎಂದರು.
“ಕೊಲೆ ಹಿಂದಿನ ಉದ್ದೇಶದ ಬಗ್ಗೆ ನಾವು ಶೀಘ್ರದಲ್ಲೇ ನಿಮಗೆ ತಿಳಿಸುತ್ತೇವೆ”. ಭಾರತೀಯ ಪೊಲೀಸರು ಪ್ರಕರಣದ ತನಿಖೆಗೆ ಸಹಕರಿಸುತ್ತಿದ್ದಾರೆ ಎಂದು ಎಂದು ಸಚಿವರು ಹೇಳಿದ್ದಾರೆ.
ಮೂರು ಬಾರಿ ಸಂಸದರಾಗಿದ್ದ ಅನ್ವರುಲ್ ಅಜೀಂ ಅನಾರ್ ಅವರು ಚಿಕಿತ್ಸೆ ಪಡೆಯಲು ಮೇ 12 ರಂದು ಭಾರತಕ್ಕೆ ಬಂದು ನಾಪತ್ತೆಯಾಗಿದ್ದರು. ಮೇ 18 ರಂದು ಉತ್ತರ ಕೋಲ್ಕತ್ತಾದ ಬಾರಾನಗರ ಪೊಲೀಸ್ ಠಾಣೆಯಲ್ಲಿ ಸಂಸದನ ನಾಪತ್ತೆ ಕುರಿತು ಸಾಮಾನ್ಯ ಡೈರಿ ವರದಿಯಲ್ಲಿ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.