ಬೆಂಗಳೂರು: 2019ರ ಏಪ್ರಿಲ್ ತಿಂಗಳಿಗೂ ಮೊದಲು ನೋಂದಾಯಿಸಲಾದ ವಾಹನಗಳಿಗೆ ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್‌ಗಳ(ಎಚ್‌ಎಸ್‌ಆರ್‌ಪಿ) ಅಳವಡಿಕೆ ಗಡುವನ್ನು ರಾಜ್ಯ ಸರ್ಕಾರ ಜೂನ್ 12 ವರೆಗೆ ವಿಸ್ತರಿಸಿದೆ.
ಈ ಕುರಿತು ಕರ್ನಾಟಕ ಹೈಕೋರ್ಟ್ ಗೆ ಮಾಹಿತಿ ನೀಡಿರುವ ರಾಜ್ಯ ಸರ್ಕಾರ, ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸದ ವಾಹನ ಸವಾರರ ವಿರುದ್ಧ ಜೂ.12ರವರೆಗೂ ಯಾವುದೇ ಕಠಿಣ ಕ್ರಮ ಕೈಗೊಳ್ಳುವುದಿಲ್ಲಎಂದು ತಿಳಿಸಿದೆ.
ಹಳೆ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಕಡ್ಡಾಯ ಕುರಿತು ಎಚ್‌ಎಸ್‌ಆರ್‌ಪಿ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮತ್ತು ಇತರರು ಸಲ್ಲಿಸಿದ ಮೇಲ್ಮನವಿಗಳ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಎಸ್‌ಆರ್ ಕೃಷ್ಣ ಕುಮಾರ್ ಮತ್ತು ನ್ಯಾಯಮೂರ್ತಿ ರಾಮಚಂದ್ರ ಡಿ ಹುದ್ದಾರ್ ಅವರನ್ನೊಳಗೊಂಡ ರಜಾಕಾಲದ ವಿಭಾಗೀಯ ಪೀಠಕ್ಕೆ ರಾಜ್ಯ ಸರ್ಕಾರ ಈ ಮಾಹಿತಿ ನೀಡಿದೆ.ನಂಬರ್ ಪ್ಲೇಟ್ ಸಿದ್ಧಪಡಿಸುವ ಕಂಪನಿಗಳಲ್ಲೊಂದಾದ ಬಿಎನ್‌ಡಿ ಎನರ್ಜಿ ಲಿಮಿಟೆಡ್, ನಂಬರ್ ಫಲಕ ಅಳವಡಿಸಲು ವಿಧಿಸಿರುವ ಮೇ 31ರ ಗಡುವು ವಿಸ್ತರಿಸಬೇಕೆಂದು ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿತ್ತು.
ವಿಚಾರಣೆ ವೇಳೆ ಗಡುವು ಮುಕ್ತಾಯದ ಪರಿಣಾಮವನ್ನು ವಿಭಾಗೀಯ ಪೀಠವು ಪ್ರಶ್ನಿಸಿದಾಗ, ಜೂನ್ 12 ರವರೆಗೆ ಯಾವುದೇ ಕಠಿಣ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಸರ್ಕಾರಿ ವಕೀಲರು ಹೇಳಿದರು. ಪೀಠವು ಮುಂದಿನ ವಿಚಾರಣೆಯನ್ನು ಜೂನ್ 11 ಕ್ಕೆ ಮುಂದೂಡಿದೆ.