ಬೆಂಗಳೂರು: ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ಅಂಗಡಿ ಮಾಲೀಕರಿಂದ ಲಂಚ ಪಡೆಯುತ್ತಿದ್ದ ವೇಳೆ ಸಾರ್ವಜನಿಕರು ಅದನ್ನು ವಿಡಿಯೋ ಮಾಡಿದ್ದು, ಇದನ್ನು ಗಮನಿಸಿದ ಪೊಲೀಸರು ತಕ್ಷಣ ಅಲ್ಲಿಂದ ವೇಗವಾಗಿ ಜಾಗ ಖಾಲಿ ಮಾಡಿದ್ದಾರೆ. ಈ ವೇಳೆ ಸ್ವಲ್ಪ ದೂರದವರೆಗೆ ಸಾರ್ವಜನಿಕರು ಪೊಲೀಸ್ ವಾಹನವನ್ನು ಬೆನ್ನಟ್ಟಿದ ಘಟನೆ ರಾಜಗೋಪಾಲ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪೀಣ್ಯ ಎರಡನೇ ಹಂತದ ಬಳಿ ಶುಕ್ರವಾರ ರಾತ್ರಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೊಯ್ಸಳ ವಾಹನದ ಸಿಬ್ಬಂದಿ ಅಂಗಡಿಯವರಿಂದ ಹಣ ವಸೂಲಿ ಮಾಡುತ್ತಿದ್ದಾಗ ವ್ಯಕ್ತಿಯೊಬ್ಬರು ಅದನ್ನು ರೆಕಾರ್ಡ್ ಮಾಡಲು ಪ್ರಾರಂಭಿಸಿದ ನಂತರ ವೇಗವಾಗಿ ಓಡುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ವ್ಯಕ್ತಿ ಗಸ್ತು ವ್ಯಾನ್ ಹತ್ತಿರ ಬರುತ್ತಿದ್ದಂತೆ, ವಾಹನದ ಚಾಲಕ ಆತುರಾತುರವಾಗಿ ಘಟನಾ ಸ್ಥಳದಿಂದ ದೂರ ಹೋಗುತ್ತಾನೆ. ಅಲ್ಲದೆ ವಿಡಿಯೋ ರೆಕಾರ್ಡ್ ಮಾಡುವ ವ್ಯಕ್ತಿಯು ಸ್ವಲ್ಪ ದೂರದವರೆಗೆ ವಾಹನವನ್ನು ಬೆನ್ನತ್ತಿ ಹೋಗುತ್ತಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಮಂಗಳವಾರ ಈ ಬಗ್ಗೆ ಪರಿಶೀಲಿಸುವುದಾಗಿ ಹೇಳಿದ್ದಾರೆ. ತನಿಖೆಗೆ ಆದೇಶಿಸಲಾಗಿದೆ ಮತ್ತು ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಉಪ ಆಯುಕ್ತ(ಉತ್ತರ) ಸೈದುಲು ಅದಾವತ್ ಅವರು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.ಹೊಯ್ಸಳ ಗಸ್ತು ತಿರುಗುವ ವಾಹನಗಳನ್ನು ಸಹಾಯಕ ಸಬ್-ಇನ್‌ಸ್ಪೆಕ್ಟರ್ (ASI) ಮತ್ತು ಕಾನ್ಸ್‌ಟೇಬಲ್ ನಿರ್ವಹಿಸುತ್ತಿದ್ದು, ಅವರು ಬಾಡಿ ಕ್ಯಾಮೆರಾಗಳು ಮತ್ತು ವಾಹನದಲ್ಲಿ ಮೊಬೈಲ್ ಡೇಟಾ ಟರ್ಮಿನೇಷನ್ (MDT) ನಿರ್ವಹಿಸುತ್ತಾರೆ. ಈ ಹಿಂದೆ ಈ ವಾಹನಗಳಿಗೆ ಹೆಡ್ ಕಾನ್‌ಸ್ಟೆಬಲ್ ಮತ್ತು ಕಾನ್‌ಸ್ಟೆಬಲ್ ಮುಖ್ಯಸ್ಥರಾಗಿರುತ್ತಿದ್ದರು.