ಆನೇಕಲ್ ತಾಲ್ಲೂಕಿನ ಕನ್ನಡ ಭಾಷೆ, ಸಂಸ್ಕೃತಿಕ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಹೋಗುವ ಸಲುವಾಗಿ ಕೂಡಲೇ ಕನ್ನಡಭವನ ನಿರ್ಮಿಸಬೇಕಾದ ಅಗತ್ಯವಿದೆ ಎಂದು ಶಿಕ್ಷಣ ತಜ್ಞ ಜಿ.ಮುನಿರಾಜು ರವರು ತಿಳಿಸಿದರು.
ಮಂಡ್ಯದಲ್ಲಿ ನಡೆಯುತ್ತಿರುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಆನೇಕಲ್ ತಾಲ್ಲೂಕು ಕನ್ನಡಾಭಿಮಾನಿಗಳಿಗಾಗಿ ಕೆ.ಎಸ್.ಆರ್.ಟಿ.ಸಿ ಸಾರಿಗೆ ಇಲಾಖೆಯಿಂದ ಆಯೋಜಿಸಿರುವ ಬಸ್ ಸೇವೆಗೆ ಚಾಲನೆ ನೀಡಿ ಮಾತನಾಡಿದರು.
ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಸಂಸ್ಕೃತ, ಕಲೆ, ಭಾಷೆ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಹಾಗೆಯೇ, ನಮ್ಮ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಉಪಧ್ಯಕ್ಷರಾದ ಎನ್.ಲೋಕೇಶ್ ಗೌಡ ಅವರು ಹೇಳಿದರು.
ಈಗಾಗಲೇ ಶಾಸಕ ಬಿ.ಶಿವಣ್ಣ ಅವರು ಕನ್ನಡಭವನ ನಿರ್ಮಾಣಕ್ಕೆ ಆಸಕ್ತಿ ತೋರಿದ್ದಾರೆ. ಅದನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಕನ್ನಡ ಸಂಘ-ಸಂಸ್ಥೆಗಳು ಒತ್ತಡ ಹಾಕಬೇಕಿದೆ. ಇದರ ಜೊತೆಗೆ ಪುರಸಭೆ ಸದಸ್ಯರು ಹಾಗೂ ಅಧಿಕಾರಿಗಳು ಕನ್ನಡ ಭವನ ನಿರ್ಮಾಣಕ್ಕೆ ಅಗತ್ಯವಾದ ಜಾಗವನ್ನು ಗುರುತಿಸಬೇಕಾಗಿದೆ ಎಂದು ಅವರು ಹೇಳಿದರು.
ಕನ್ನಡ ಭಾಷೆಯನ್ನು ಕೇವಲ ನವೆಂಬರ್ಗೆ ಸೀಮಿತಗೊಳಿಸಬಾರದು. ನಿಸಾರ ಅಹಮ್ಮದ್ ಅವರ ನಿತ್ಯೋತ್ಸವದಂತೆ ನಿತ್ಯವಾಗಿರಬೇಕು. ಕನ್ನಡ ನಾಡು ನುಡಿ ಭಾಷೆ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ತಬಲಾ ಮಂಜು ರವರು ಹೇಳಿದರು
ಚುಟುಕು ಶಂಕರ್ ರವರು ಮಾತನಾಡಿ ಪುಸ್ತಕ ಓದುವ ಗೀಳು ಬೆಳೆಸಿಕೊಳ್ಳಬೇಕು. ಓದುವ ಪ್ರವೃತ್ತಿ ಹೆಚ್ಚಿಸುವ ಸಾಹಿತ್ಯ ಇನ್ನಷ್ಟು ಮೂಡಿಬರಲಿ ಎಂದು ಹೇಳಿದರು.
ಇನ್ನೂ ಈ ಕಾರ್ಯಕ್ರಮದಲ್ಲಿ ಎಲೈಟ್ ಅಕಾಡೆಮಿ ಜಿ.ಎಮ್.ಆರ್ ಮುನಿರಾಜು ರವರು, ಆನೇಕಲ್ ತಾಲ್ಲೂಕು ಅಧ್ಯಕ್ಷ ಆದೂರು ಪ್ರಕಾಶ್, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಉಪಾಧ್ಯಕ್ಷರಾದ ಲೋಕೇಶ್ಗೌಡ, ತಬಲ ಮಂಜು, ಚುಟುಕು ಶಂಕರ್, ಅಪ್ಸರ್ ಅಲಿಖಾನ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ಮಂಜುನಾಥ್ ಮತ್ತಿತರರು ಹಾಜರಿದ್ದರು.
ವರದಿ :- ನಾಗರಾಜ್ ಪದ್ಮಶಾಲಿ