Uttar Pradesh: ಒಂದೇ ದಿನ 8 ಬಾರಿ ಮತದಾನ ಮಾಡಿದ ಯುವಕನ ಬಂಧನ, ಇಟಾಹ್​ನಲ್ಲಿ ಮರು ಮತದಾನಕ್ಕೆ ಆದೇಶ!, ವಿಡಿಯೋ ವೈರಲ್!

Uttar Pradesh: ಒಂದೇ ದಿನ 8 ಬಾರಿ ಮತದಾನ ಮಾಡಿದ ಯುವಕನ ಬಂಧನ, ಇಟಾಹ್​ನಲ್ಲಿ ಮರು ಮತದಾನಕ್ಕೆ ಆದೇಶ!, ವಿಡಿಯೋ ವೈರಲ್!

Share

ಲಖನೌ: ಲೋಕಸಭಾ ಚುನಾವಣೆಯ 5ನೇ ಹಂತದ ಮತದಾನ ಮುಕ್ತಾಯವಾಗಿದ್ದು, ಇದರ ನಡುವೆಯೇ ಮೂರನೇ ಹಂತದಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಮತದಾನದ ವೇಳೆ ವ್ಯಕ್ತಿಯೋರ್ವ ಒಂದೇ ದಿನ ಬರೊಬ್ಬರಿ 8 ಬಾರಿ ಮತದಾನ ಮಾಡಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

ಉತ್ತರಪ್ರದೇಶದ ಇಟಾಹ್‌(Etah)ನಲ್ಲಿ ಮೂರನೇ ಹಂತದ ಮತದಾನದಲ್ಲಿ ಯುವಕನೊಬ್ಬ ಒಂದೇ ಬೂತ್‌ನಲ್ಲಿ 8 ಬಾರಿ ಮತ ಚಲಾಯಿಸಿ ಸಿಕ್ಕಿಬಿದ್ದಿದ್ದಾನೆ. ಅಷ್ಟೇ ಅಲ್ಲ ಪ್ರತಿ ಬಾರಿಯೂ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾನೆ.

2 ನಿಮಿಷ 20 ಸೆಕೆಂಡ್‌ನ ಈ ವಿಡಿಯೋದಲ್ಲಿ ಈ ಯುವಕ ಪ್ರತಿ ಬಾರಿಯೂ ಮತದಾನ ಮಾಡಿದ್ದಾನೆ. ಅವರು ಕಮಲದ ಚಿಹ್ನೆಯ ಮುಂಭಾಗದಲ್ಲಿರುವ ಗುಂಡಿಯನ್ನು ಒತ್ತುವುದನ್ನು ಕಾಣಬಹುದು.ಫರೂಖಾಬಾದ್‌ ಲೋಕಸಭಾ ಕ್ಷೇತ್ರದ ಆಲಿಗಂಜ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮತಗಟ್ಟೆಯಲ್ಲಿ ಘಟನೆ ನಡೆದಿದ್ದು, ಈ ಕ್ಷೇತ್ರದಲ್ಲಿ ಮೇ 13ರಂದು ಮತದಾನ ನಡೆದಿತ್ತು.ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಟ್ವಿಟ್ಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಅದರ ಮೇಲೆ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಎಚ್ಚೆತ್ತ ಚುನಾವಣಾ ಆಯೋಗ, ಮರು ಮತದಾನಕ್ಕೆ ಆದೇಶ

ವ್ಯಕ್ತಿಯ ಮತದಾನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಎಚ್ಚೆತ್ತುಕೊಂಡಿರುವ ಚುನಾವಣಾ ಆಯೋಗ ಇಟಾಹ್ ದಲ್ಲಿ ಮರುಮತದಾನಕ್ಕೆ ಆದೇಶ ಹೊರಡಿಸಿದೆ. ಈ ಬಗ್ಗೆ ಮಾತನಾಡಿರುವ ಉತ್ತರ ಪ್ರದೇಶ ಮುಖ್ಯ ಚುನಾವಣಾಧಿಕಾರಿ ನವದೀಪ್ ರಿನ್ವಾ ಅವರು, ‘ವಿಚಾರ ತಿಳಿಯುತ್ತಲೇ ತಕ್ಷಣ ಕಾರ್ಯಪ್ರವೃತ್ತರಾಗಿ ಯುವಕನನ್ನು ಬಂಧಿಸಲಾಗಿದೆ. ಚುನಾವಣಾ ತಂಡದ ಎಲ್ಲ ಸದಸ್ಯರನ್ನು ಅಮಾನತುಗೊಳಿಸಲಾಗಿದ್ದು, ಮರು ಮತದಾನಕ್ಕೆ ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದರು.ಬಂಧಿತ ಯುವಕನನ್ನು ಇಟಾ ಜಿಲ್ಲೆಯ ಖಿರಿಯ ಪಮರಾನ್ ಗ್ರಾಮದ ನಿವಾಸಿ ಎಂದು ಪೊಲೀಸರು ತಿಳಿಸಿದ್ದು, ಈತ ಸ್ಥಳೀಯ ಬಿಜೆಪಿ ಮುಖಂಡನ ಮಗ ಎನ್ನಲಾಗುತ್ತಿದೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಂತರ ನಯಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಭಾನುವಾರ ರಾತ್ರಿ ಯುವಕನನ್ನು ಬಂಧಿಸಲಾಗಿದೆ.


Share