LokSabhaElections2024: 5ನೇ ಹಂತದಲ್ಲಿ ಶೇ.60.09ರಷ್ಟು ಮತದಾನ, ಬಾರಾಮುಲ್ಲಾದಲ್ಲಿ ಇತಿಹಾಸದಲ್ಲೇ ಗರಿಷ್ಠ Voting

LokSabhaElections2024: 5ನೇ ಹಂತದಲ್ಲಿ ಶೇ.60.09ರಷ್ಟು ಮತದಾನ, ಬಾರಾಮುಲ್ಲಾದಲ್ಲಿ ಇತಿಹಾಸದಲ್ಲೇ ಗರಿಷ್ಠ Voting

Share

ನವದೆಹಲಿ: ಲೋಕಸಭಾ ಚುನಾವಣೆಯ 5ನೇ ಹಂತದ ಮತದಾನ ಮುಕ್ತಾಯವಾಗಿದ್ದು, ಒಟ್ಟಾರೆ ಶೇ.60.09ರಷ್ಟು ಮತದಾನವಾಗಿದೆ ಎಂದು ಕೇಂದ್ರ ಚುನವಣಾ ಆಯೋಗ ತಡರಾತ್ರಿ ಮಾಹಿತಿ ನೀಡಿದೆ.

ಸೋಮವಾರ ನಡೆದ ಮತದಾನ ಪ್ರಕ್ರಿಯೆ ಬಹುತೇಕ ಕಡೆ ಶಾಂತಿಯುತವಾಗಿ ಮತದಾನ ನಡೆದಿದ್ದು, ಪಶ್ಚಿಮ ಬಂಗಾಳದ ಕೆಲವೆಡೆ ಮಾತ್ರ ಗಲಾಟೆ ನಡೆದಿವೆ ಎಂದು ತಿಳಿದುಬಂದಿದೆ. ರಾತ್ರಿ 11.30ರ ಹೊತ್ತಿಗೆ ಮತದಾನ ಪ್ರಮಾಣದ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಚುನಾವಣಾ ಆಯೋಗ ಒಟ್ಟಾರೆ ಇಂದು ಶೇ.60.09ರಷ್ಟು ಮತದಾನವಾಗಿದೆ ಎಂದು ಹೇಳಿದೆ.ಆರು ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ 49 ಕ್ಷೇತ್ರಗಳಲ್ಲಿ ಇಂದು ಮತದಾನವಾಗಿದ್ದು, ಈ ಹಿಂದಿನ ಹಂತಗಳಿಗೆ ಹೋಲಿಕೆ ಮಾಡಿದರೆ 5ನೇ ಹಂತದಲ್ಲಿ ಮತದಾನ ಪ್ರಮಾಣ ಕಡಿಮೆಯಾದಂತಿದೆ.

ಪಶ್ಚಿಮ ಬಂಗಾಳದಲ್ಲಿ ಗರಿಷ್ಠ, ಮಹಾರಾಷ್ಟ್ರದಲ್ಲಿ ಕನಿಷ್ಠ ಮತದಾನ

ಇನ್ನು ಪಶ್ಚಿಮ ಬಂಗಾಳದಲ್ಲಿ ಐದನೇ ಹಂತದಲ್ಲಿ ಹೆಚ್ಚಿನ ಮತದಾನ ದಾಖಲಾಗಿದೆ. ರಾಜ್ಯದಲ್ಲಿ ಕೆಲವೆಡೆ ಹಿಂಸಾಚಾರ ಪ್ರಕರಣಗಳು ಸುದ್ದಿಯಾಗಿದ್ದರೂ ಶೇ.74.65ರಷ್ಟು ಮತದಾನ ದಾಖಲಾಗಿದೆ. ಇನ್ನು ಲಡಾಖ್ ನಲ್ಲಿ ಶೇ.69.62, ಜಾರ್ಖಂಡ್‌ನಲ್ಲಿ ಶೇ.63.07ರಷ್ಟು ಮತದಾನ ನಡೆದಿದೆ. ಇನ್ನು ಮಹಾರಾಷ್ಟ್ರದಲ್ಲಿ ಕೇವಲ ಶೇ.54.29ರಷ್ಟು ಮತದಾನ ದಾಖಲಾಗಿದ್ದು, ಐದನೇ ಹಂತದಲ್ಲಿ ಕನಿಷ್ಠ ಮತದಾನ ನಡೆದ ರಾಜ್ಯ ಎನಿಸಿದೆ. ನಾಲ್ಕನೇ ಹಂತದಲ್ಲೂ ಮಹಾರಾಷ್ಟ್ರದಲ್ಲೂ ಕನಿಷ್ಠ ಮತದಾನ ದಾಖಲಾಗಿತ್ತು.

ಉತ್ತರ ಪ್ರದೇಶದಲ್ಲಿ ಶೇ.57.79% ಮತದಾನವಾಗಿದ್ದು, ಒಡಿಶಾದಲ್ಲಿ 67.59% ಮತದಾನ, ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ 56.73% ಮತ್ತು ಬಿಹಾರದಲ್ಲಿ 54.85% ರಷ್ಟು ಮತದಾನ ದಾಖಲಾಗಿದೆ.

ದಾಖಲೆ ಬರೆದ ಬಾರಾಮುಲ್ಲಾ, ಉಗ್ರರ ಎಚ್ಚರಿಕೆ ನಡುವೆಯೂ ದಾಖಲೆಯ ಮತದಾನ

ಇನ್ನು ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಉಗ್ರ ಪೀಡಿತ ಬಾರಾಮುಲ್ಲಾದಲ್ಲಿ ಇತಿಹಾಸದಲ್ಲೇ ಗರಿಷ್ಠ ಮತದಾನ ದಾಖಲಾಗಿದೆ. ಉಗ್ರರ ಎಚ್ಚರಿಕೆ ನಡುವೆಯೂ ಇಲ್ಲಿ ಮತದಾರರು ಯಥೇಚ್ಚ ಪ್ರಮಾಣದಲ್ಲಿ ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡಿದ್ದಾರೆ. ಸೋಮವಾರ ಸಂಜೆ ಮುಕ್ತಾಯವಾದ ಮತದಾನ ಪ್ರಕ್ರಿಯೆಯಲ್ಲಿ ಬಾರಾಲಮುಲ್ಲಾದಲ್ಲಿ ಬರೊಬ್ಬರಿ ಶೇ.59ರಷ್ಟು ಮತದಾನವಾಗಿದೆ. ಇದು ಬಾರಾಮುಲ್ಲಾ ಇತಿಹಾಸದಲ್ಲೇ ಗರಿಷ್ಟ ಮತದಾನ ಎಂದು ಹೇಳಲಾಗಿದೆ.”ಬಾರಾಮುಲ್ಲಾ ಲೋಕಸಭಾ ಕ್ಷೇತ್ರದಲ್ಲಿ 1967 ರಲ್ಲಿ ಮೊದಲ ಬಾರಿಗೆ ಸಂಸತ್ತಿಗೆ ಚುನಾವಣೆ ನಡೆದಾಗಿನಿಂದ ದಾಖಲೆಯ ಮತದಾನಕ್ಕೆ ಸಾಕ್ಷಿಯಾಗಿದೆ” ಎಂದು ಕೇಂದ್ರಾಡಳಿತ ಪ್ರದೇಶದ ಮುಖ್ಯ ಚುನಾವಣಾಧಿಕಾರಿ ಪಿ.ಕೆ.ಪೋಲ್ ಶ್ರೀನಗರದಲ್ಲಿ ತಿಳಿಸಿದ್ದಾರೆ. ಈ ಹಿಂದೆ ಅಂದರೆ 1984ರಲ್ಲಿ ಬಾರಾಮುಲ್ಲಾದಲ್ಲಿ ಶೇ.58.90ರಷ್ಚು ಮತದಾನವಾಗಿತ್ತು. ಇದು ಈ ವರೆಗಿನ ಗರಿಷ್ಠ ಮತದಾನವಾಗಿತ್ತು. ಆದರೆ ಇಂದು ಈ ಪ್ರಮಾಣವನ್ನೂ ಮೀರಿಸುವಷ್ಟು ಮತದಾನವಾಗಿದೆ. ಬಾರಾಮುಲ್ಲದಲ್ಲಿ 17,37,865 ನೋಂದಾವಣಿ ಮಾಡಿಕೊಂಡ ಮತದಾರರಿದ್ದಾರೆ ಎಂದು ಅಧಿಕಾರಿ ತಿಳಿಸಿದರು.

ಸೋಪೋರ್ ನಲ್ಲಿ ಶೇ.44.36ರಷ್ಟು, ಕುಪ್ವಾರದಲ್ಲೂ ಗರಿಷ್ಠ ಅಂದರೆ ಶೇ.67.50ರಷ್ಟು ಮತ್ತು ಗುರೇಜ್ ನಲ್ಲಿ ಕನಿಷ್ಟ ಅಂದರೆ ಶೇ.40.82ರಷ್ಟು ಮತದಾನವಾಗಿದೆ ಎಂದು ಅಧಿಕಾರಿ ಪೋಲ್ ತಿಳಿಸಿದರು.

ಉಳಿದಂತೆ ಲ್ಯಾಂಗೇಟ್‌ ಶೇ.66, ಸೋನಾವರಿ ಶೇ.64.61, ಕರ್ನಾ ಶೇ.61.53, ಟ್ರೆಗಮ್ ಶೇ.61.17, ಉರಿಯಲ್ಲಿ ಶೇ.60.27 ಮತದಾನವಾಗಿದೆ. ಅಲ್ಲದೆ ಬಂಡಿಪೋರಾ ಶೇ.60.24, ಬೀರ್ವಾ ಶೇ.56.63, ಬುದ್ಗಾಮ್ ಶೇ.51.76, ಗುಲ್ಮಾರ್ಗ್ ಶೇ.58.50, ಕುಪ್ವಾರ ಶೇ.58.90, ಲೋಲಾಬ್ ಶೇ.58, ಪಟ್ಟನ್ ಶೇ.59.87, ರಫಿಯಾಬಾದ್ ಶೇ.57.39, ವಾಗೂರ್-ಕ್ರೀರಿ ಶೇ.49.79 ಮತದಾನವಾಗಿದೆ.


Share