ಬೆಂಗಳೂರು: ನೂರಾರು ಮಹಿಳೆಯರ ಜೊತೆಗಿನ ರಾಸಲೀಲೆ ವಿಡಿಯೋಗಳು ಬಹಿರಂಗಗೊಂಡ ನಂತರ ವಿದೇಶಕ್ಕೆ ಪರಾರಿಯಾಗಿರುವ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್ಪೋರ್ಟ್ ರದ್ದು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಮಂಗಳಾವರ ತಿಳಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಗೃಹ ಸಚಿವರು, ಪ್ರಜ್ವಲ್ ರೇವಣ್ಣ ಬಂಧನಕ್ಕೆ ಈಗಾಗಲೆ ವಾರಂಟ್ ಜಾರಿ ಆಗಿದೆ. ಅದರ ಆಧಾರದ ಮೇಲೆ ರಾಜತಾಂತ್ರಿಕ ಪಾಸ್ಪೋರ್ಟ್ ರದ್ದು ಕೋರಿ ಪತ್ರ ಬರೆಯಲಾಗಿದೆ. ಪಾಸ್ಪೋರ್ಟ್ ರದ್ದು ಮಾಡಿದರೆ ಪ್ರಜ್ವಲ್ ಭಾರತಕ್ಕೆ ಬರಬೇಕಾಗುತ್ತದೆ ಎಂದರು.
ಇದೇ ವೇಳೆ, ಎಸ್ಐಟಿ ಮುಂದೆ ಶರಣಾಗುವಂತೆ ಪ್ರಜ್ವಲ್ ರೇವಣ್ಣ ಅವರಿಗೆ ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಮನವಿ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ ಅವರು, ಇದು ಅವರ ಕುಟುಂಬದ ಆಂತರಿಕ ವಿಚಾರ ಎಂದರು.ಇನ್ನು ಫೋನ್ ಟ್ಯಾಪ್ ಆಗುತ್ತಿದೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಸರ್ಕಾರದ ವತಿಯಿಂದ ಯಾರ ಫೋನ್ ಸಹ ಟ್ಯಾಪ್ ಮಾಡಿಲ್ಲ. ಒಂದು ವೇಳೆ ಫೋನ್ ಟ್ಯಾಪ್ ಆಗಿದ್ದರೆ ದಾಖಲೆ ಕೊಡಲಿ. ತನಿಖೆ ಮಾಡುತ್ತೇವೆ ಎಂದರು.
ವಕೀಲ ದೇವರಾಜೇಗೌಡ ಆಡಿಯೋ ಬಗ್ಗೆ ಎಸ್ಐಟಿ ನೋಡಿಕೊಳ್ಳುತ್ತೆ. ಪ್ರತಿಯೊಂದು ಹಂತದಲ್ಲಿ ತನಿಖೆ ಮಾಡಲು ನಾವು ಹೇಳಲ್ಲ. ತನಿಖೆ ಮಾಡಲು ಎಸ್ಐಟಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದೇವೆ ಎಂದು ಹೇಳಿದರು.
ಎಚ್.ಡಿ ದೇವೇಗೌಡರ ಕುಟುಂಬ ಮುಗಿಸಲು ಷಡ್ಯಂತ್ರ್ಯ ನಡೆಸಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಎಚ್ ಡಿ ಕುಮಾರಸ್ವಾಮಿ ಅವರು ಯಾವ ಉದ್ದೇಶದಿಂದ ಹೇಳಿದ್ದಾರೆ ಗೊತ್ತಿಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ಬಹಳ ಕೆಲಸ ಇದೆ. ಆಡಳಿತ ಮಾಡಬೇಕು. ಇಡೀ ದೇಶ ನಮ್ಮ ಕಾಂಗ್ರೆಸ್ ಸರ್ಕಾರದ ಕಡೆ ನೋಡುತ್ತಿದೆ ಎಂದರು.
ಇನ್ನು ಬೆಂಗಳೂರಿನ ಜಿ.ಆರ್.ಫಾರ್ಮ್ಹೌಸ್ನಲ್ಲಿ ನಡೆದಿದ್ದ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರ ದಾಳಿ ನಡೆಸಿದ ವೇಳೆ ಡ್ರಗ್ಸ್, ಸಿಂಥೆಟಿಕ್ ಡ್ರಗ್ಸ್ ಪತ್ತೆ ಆಗಿದೆ. ಪೊಲೀಸರು ಪಾರ್ಟಿಯಲ್ಲಿ ಭಾಗಿಯಾದವರ ಮಾಹಿತಿ ಪಡೆದಿದ್ದಾರೆ. ಡ್ರಗ್ಸ್ ಫ್ರೀ ರಾಜ್ಯ ಮಾಡಬೇಕು ಅಂತ ಕ್ರಮ ಕೈಗೊಳ್ಳುತ್ತಿದ್ದೇವೆ. ಗಾಂಜಾ ಎಲ್ಲಿಂದ ಬರುತ್ತೆ ಎಂಬ ಮಾಹಿತಿ ಮೇಲೆ ಆರೋಪಿಗಳನ್ನು ಹಿಡಿಯುತ್ತೇವೆ. ಪೆಡ್ಲರ್ಸ್ ಯಾರಿದ್ದಾರೆ ಅವರನ್ನು ಹಿಡಿಯವುದು ಬಹಳ ಮುಖ್ಯ. ರೇವ್ ಪಾರ್ಟಿ ಹತ್ತಿಕ್ಕುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.