ಆಳಂದ:- ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿ ದೇಶದಲ್ಲಿರುವ ಕಾನೂನುಗಳು ಮತ್ತು ಅವುಗಳ ಪ್ರಾಮುಖ್ಯತೆಯನ್ನು ಹಾಗೂ ಅವರುಗಳಿಂದಾಗು ಸಮಾಜದಲ್ಲಿ ಒಳತನ್ನು ಅರಿತುಕೊಂಡು ನಾಗರಿಕರು ಕಾನೂನು ಪಾಲನೆ ಅಗತ್ಯವಾಗಿದೆ ಎಂದು ಹಿರಿಯ ಶ್ರೇಣಿಯ ನ್ಯಾಯಾಧೀಶ ಎಸ್.ಎಂ. ಅರುಟಗಿ ಅವರು ಇಂದಿಲ್ಲಿ ಕರೆ ನೀಡಿದರು.ಪಟ್ಟಣದ ತಾಲೂಕು ಕಾನೂನು ಸೇವಾ ಸಮತಿ, ನ್ಯಾಯವಾದಿಗಳ ಸಂಘ, ಬಾಲಕಾರ್ಮಿಕ ಯೋಜನಾ ಸಂಘ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪತ್ರಕರ್ತರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಮತ್ತು ಜಾಗೃತಿ ಜಾಥಾವನ್ನು ಸ್ಥಳೀಯ ನ್ಯಾಯಾಲಯ ಆವರಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ಬಾಲಕಾರ್ಮಿಕ (ನಿಷೇಧ) ಮತ್ತು ನಿಯಂತ್ರಣ) ಕಾಯ್ದೆ, 1986 ಅನ್ನು ಕಾಗದದಲ್ಲಿ ಮಾತ್ರ ಉಳಿಯದೇ, ಕಾರ್ಯರೂಪಕ್ಕೆ ತರುವುದೇ ಪ್ರಮುಖವಾಗಿದೆ,” ಎಂದು ಅವರು ಹೇಳಿದರು.ಈ ಕಾನೂನುಗಳ ಪರಿಣಾಮಕಾರಿ ಅನುಷ್ಠಾನ ಕ್ಕಾಗಿ ಸಾರ್ವಜನಿಕ ಮತ್ತು ಆಡಳಿತಾತ್ಮಕ ಸಹಕಾರದ ಅಗತ್ಯ, ಪಾಲಕರು, ಶಿಕ್ಷಕರು, ಮತ್ತು ಸಮಾಜದ ಉಳಿದ ಭಾಗಗಳೆಲ್ಲರೂ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಜಾಗೃತಿಯನ್ನು ಮೂಡಿಸಲು ಮತ್ತು ಸಹಕರಿಸಲು ಜವಾಬ್ದಾರರಾಗಿದ್ದು, ನಾವು ನಮ್ಮ ಮಕ್ಕಳ ಭವಿಷ್ಯವನ್ನು ಸುರಕ್ಷಿತಗೊಳಿಸಲು ಬದ್ಧರಾಗಿರಬೇಕು ಎಂದು ಅವರು ಹೇಳಿದರು.ಸಮುದಾಯ ಮಟ್ಟದಲ್ಲಿ ಜಾಗೃತಿಯು ಮತ್ತು ಮಕ್ಕಳ ಹಕ್ಕುಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನೂ ಬೆಂಬಲಿಸುವ ಇಂದಿನ ಅಗತ್ಯವನ್ನು ಪ್ರಸ್ತಾಪಿಸಿz ನ್ಯಾಯಾಧೀಶರು, ನಿಯಂತ್ರಣ ಸಂಸ್ಥೆಗಳ ನಿಯಮಿತ ಪರಿಶೀಲನೆ ಮತ್ತು ಬಲವಂತದ ಶ್ರಮದ ವಿರುದ್ಧದ ಕ್ರಮಗಳ ಅಗತ್ಯತೆಯನ್ನು ಅವರು ವಿವರಿಸಿದರು.“ಬಾಲಕಾರ್ಮಿಕರನ್ನು ಪತ್ತೆಹಚ್ಚಿ ಅವರನ್ನು ಪುನರ್ವಸತಿಗೊಳಿಸಲು, ಮತ್ತು ಮಕ್ಕಳ ಶಿಕ್ಷಣದ ಹಕ್ಕುಗಳನ್ನು ಸುಧಾರಿಸಲು ಪರಸ್ಪರ ಸಹಕಾರ ನೀಡುವುದು ಅಗತ್ಯವಿದೆ. ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಬಾಲಕಾರ್ಮಿಕ ನಿರ್ಮೂಲನೆಗಾಗಿ ಎಲ್ಲರೂ ತಮ್ಮ ಕರ್ತವ್ಯವನ್ನು ನಿಭಾಯಿಸಬೇಕು ಮಕ್ಕಳ ಭವಿಷ್ಯವನ್ನು ರೂಪಿಸಬಲ್ಲದು ಎಂದು ಅವರು ಸಲಹೆ ನೀಡಿದರು.ಪ್ರಧಾನ ಸಿವಿಲ್ ನ್ಯಾಯಾಧೀಶ ಯಲ್ಲಪ್ಪ ಕಲ್ಲಾಪೂರ, ನ್ಯಾಯವಾದಿ ಸಂಘದ ಅಧ್ಯಕ್ಷ ಕಮಲಾಕರ ವಿ. ರಾಠೋಡ, ಹೆಚ್ಚುವರಿ ನ್ಯಾಯಾಧೀಶೆ ಸುಮನ ಚಿತ್ತರಗಿ, ಕಾರ್ಮಿಕ ನಿರೀಕ್ಷಕ ರವಿಂದ್ರಕುಮಾರ ಬಳೋರಗಿ ಸೇರಿದಂತೆ ಶಾಲಾ ಮಕ್ಕಳು, ಪೋಷಕರು, ಶಿಕ್ಷಕರು ಮತ್ತು ನ್ಯಾಯವಾದಿಗಳು ಉಪಸ್ಥಿತರಿದ್ದರು.
ವರದಿ-ಡಾ ಎಂ ಬಿ ಹಡಪದ ಸುಗೂರ ಎನ್