ಮಡಿಕೇರಿ: ಭೂಕುಸಿತದಲ್ಲಿ ಎಲ್ಲರನ್ನೂ ಕಳೆದುಕೊಂಡು ಒಬ್ಬಂಟಿ; ಧೃತಿಗೆಡದೆ ಡಾಕ್ಟರೇಟ್ ಗಳಿಸಿದ ಪಲ್ಲವಿ!

ಮಡಿಕೇರಿ: ಭೂಕುಸಿತದಲ್ಲಿ ಎಲ್ಲರನ್ನೂ ಕಳೆದುಕೊಂಡು ಒಬ್ಬಂಟಿ; ಧೃತಿಗೆಡದೆ ಡಾಕ್ಟರೇಟ್ ಗಳಿಸಿದ ಪಲ್ಲವಿ!

Share

ಕೊಡಗು: ಮಡಿಕೇರಿಯ ಮಂಗಳಾದೇವಿ ನಗರದಲ್ಲಿ 2006ರಲ್ಲಿ ಸಂಭವಿಸಿದ ಭೂಕುಸಿತದಲ್ಲಿ ತನ್ನ ಕುಟುಂಬವನ್ನೇ ಕಳೆದುಕೊಂಡಿದ್ದ ಮಡಿಕೇರಿ ನಗರದ ಪಲ್ಲವಿ ಈಗ ಡಾಕ್ಟರೇಟ್ ಪದವಿಯನ್ನು ಗಳಿಸಿದ್ದಾರೆ.ಭೂ ಕುಸಿತದಲ್ಲಿ ತನ್ನ ಮನೆ ಹಾಗೂ ಕುಟುಂಬಸ್ಥರನ್ನು ಕಳೆದುಕೊಂಡಿದ್ದ ಪಲ್ಲವಿಗೆ ಆಗ 16 ವರ್ಷ. ಹೋರಾಟದ ನಂತರ ಮತ್ತು ಅವರ ದೃಢತೆ ಮತ್ತು ನಿರ್ಣಯದ ನಂತರ ಮತ್ತಷ್ಟು ಗಟ್ಟಿಯಾಗಿ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ. ದುರಂತ ಸಂಭವಿಸುವ ಮೊದಲು, ಪಲ್ಲವಿ ತನ್ನ ತಾಯಿ ಮತ್ತು ಇಬ್ಬರು ಸಹೋದರರೊಂದಿಗೆ ಮಡಿಕೇರಿಯ ಮಂಗಳಾದೇವಿ ನಗರದಲ್ಲಿನ ಸಣ್ಣ ಮನೆಯಲ್ಲಿ ವಾಸಿಸುತ್ತಿದ್ದರು. ತಾಯಿ ರಾಧಾ ಭಟ್ ದಿನಗೂಲಿ ಮಾಡುತ್ತಿದ್ದರು. ಆ ದುರಾದೃಷ್ಟದ ರಾತ್ರಿ, ಅವರು ಮಲಗಿದ್ದಾಗ, ಮಂಗಳಾದೇವಿ ನಗರದಲ್ಲಿ ಭಾರಿ ಭೂಕುಸಿತ ಸಂಭವಿಸಿ ಆರು ಜನರು ಸಾವನ್ನಪ್ಪಿದರು.ರಾಧಾ ಭಟ್, ಪಲ್ಲವಿಯ ತಂಗಿ ಜ್ಯೋತಿ, 14, ಮತ್ತು ಸಹೋದರ ಅಭಿಷೇಕ್, 12 ಬಲಿಯಾದರು. ಕೇವಲ ಪಲ್ಲವಿ ಮಾತ್ರ ಬದುಕುಳಿದಿದ್ದರು.

ದುರಂತದ ಒಂದು ತಿಂಗಳ ನಂತರ ನನ್ನ ತಾಯಿ, ಸಹೋದರಿ ಮತ್ತು ಸಹೋದರನ ಸಾವಿನ ಬಗ್ಗೆ ನನಗೆ ತಿಳಿಸಲಾಯಿತು. ಆರಂಭದಲ್ಲಿ, ನನ್ನ ತಾಯಿ ಮತ್ತು ಒಡಹುಟ್ಟಿದವರು ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ನನಗೆ ತಿಳಿಸಲಾಯಿತು. ಅವರ ಅಂತಿಮ ಸಂಸ್ಕಾರವೂ ನನಗೆ ತಿಳಿಯದಂತೆ ನಡೆದಿತ್ತು ಎಂದು ಪಲ್ಲವಿ ತಿಳಿಸಿದ್ದಾರೆ.ಈ ದುರಂತವು ನನ್ನ ಮಾನಸಿಕ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರಿತು. ಪದೇ ಪದೇ ಆತ್ಮಹತ್ಯೆಯ ಆಲೋಚನೆಗಳು ಬೆಳೆದವು. ಆದರೆ ತನ್ನ ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆಯಬೇಕು ಮತ್ತು ಇಂಗ್ಲಿಷ್ ಮಾತನಾಡಬೇಕು ಎಂಬ ಆಕೆಯ ತಾಯಿ ರಾಧಾ ಭಟ್ ಮಹತ್ವದ ಆಕಾಂಕ್ಷೆಯಾಗಿತ್ತು. ಹೀಗಾಗಿ ಪಲ್ಲವಿಯನ್ನು ಜೀವನದಲ್ಲಿ ಮೇಲೆ ಬರಲು ಪ್ರೇರೇಪಿಸಿತು.

ನನ್ನ ಚಿಕ್ಕಪ್ಪ ಸುಂದರ್ ಮತ್ತು ಚಿಕ್ಕಮ್ಮ ರುಕ್ಮಿಣಿ ನನ್ನನ್ನು ಬೆಂಬಲಿಸಿದರು ಮತ್ತು ನಾನು ಚೆನ್ನಾಗಿ ಅಧ್ಯಯನ ಮಾಡಲು ಉತ್ತೇಜನ ನೀಡಿದರು. ಬೆರಳೆಣಿಕೆಯಷ್ಟು ಸ್ನೇಹಿತರು ಮತ್ತು ಕೆಲವು ಹಿತೈಷಿಗಳು ಆಗಾಗ್ಗೆ ನನ್ನನ್ನು ಭೇಟಿ ಮಾಡಿ ನನಗೆ ನೈತಿಕ ಸ್ಥೈರ್ಯ ತುಂಬುತ್ತಿದ್ದರು. ಪುಸ್ತಕ ಓದುವ ನನ್ನ ಹವ್ಯಾಸ ಸವಾಲುಗಳನ್ನು ಜಯಿಸಲು ನನಗೆ ಸಹಾಯ ಮಾಡಿತು ಎಂದು ಅವರು ಹೇಳಿದರು. ನಾನು ಸ್ವತಂತ್ರವಾಗಿ ಬದುಕುವ ಗುರಿ ಹೊಂದಿದ್ದೆ. ನಾನು ನಾಗರಿಕ ಸೇವಾ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದೆ ಮತ್ತು ಮಡಿಕೇರಿಯ ಬೇಬಿ ಮ್ಯಾಥ್ಯೂ ನನಗೆ ತುಂಬಾ ಸಹಾಯ ಮಾಡಿದರು. ನನ್ನ ಶಾಲೆಯ ಶಿಕ್ಷಕರಾದ ಸಿಸ್ಟರ್ ಸಿಸಿಲಿ ಮತ್ತು ನಾರಾಯಣಗೌಡರ ಕೊಡುಗೆಯನ್ನು ನಾನು ಎಂದಿಗೂ ಮರೆಯಲಾರೆ ಎಂದು ಅವರು ತಿಳಿಸಿದ್ದಾರೆ.

2006ರ ದುರಂತದ ನಂತರ ಜಿಲ್ಲಾಡಳಿತ ಆಕೆಗೆ 3 ಲಕ್ಷ ರೂಪಾಯಿ ಪರಿಹಾರ ನೀಡಿತ್ತು. ಆಕೆ ಅದನ್ನು ತನ್ನ ಪದವಿ ಕೋರ್ಸ್ ಪೂರ್ಣಗೊಳಿಸಲು ಬಳಸಿಕೊಂಡರು, ಆದರೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ವಾಣಿಜ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯಲು ಸಾಲಕ್ಕಾಗಿ ಅರ್ಜಿ ಸಲ್ಲಿಸಬೇಕಾಯಿತು. ಡಾ. ಅನಸೂಯಾ ರೈ ಅವರ ಮಾರ್ಗದರ್ಶನದಲ್ಲಿ ಮಾಡಿದ “ಭಾರತೀಯ ದೃಷ್ಟಿಕೋನದಿಂದ ಬ್ಯಾಂಕಶ್ಯೂರೆನ್ಸ್ – ಉಡುಪಿ ಮತ್ತು ದ.ಕ. ಜಿಲ್ಲೆಗಳಲ್ಲಿನ ಬ್ಯಾಂಕುಗಳ ನಡುವಿನ ತುಲನಾತ್ಮಕ ಅಧ್ಯಯನ” ಎಂಬ ಅವರ ಪ್ರಬಂಧಕ್ಕಾಗಿ ಅವರು ಈಗ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಪಲ್ಲವಿ ಸದ್ಯ ಜೈನ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


Share