ನಟ ದರ್ಶನ್ ಸೇರಿ 17 ಆರೋಪಿಗಳ ಪೊಲೀಸ್ ಕಸ್ಟಡಿ ಇಂದು ಅಂತ್ಯ: 13 ವರ್ಷಗಳ ನಂತರ ಮತ್ತೆ ಜೈಲು ಪಾಲಾಗ್ತಾರಾ ‘ಡೆವಿಲ್’?

ನಟ ದರ್ಶನ್ ಸೇರಿ 17 ಆರೋಪಿಗಳ ಪೊಲೀಸ್ ಕಸ್ಟಡಿ ಇಂದು ಅಂತ್ಯ: 13 ವರ್ಷಗಳ ನಂತರ ಮತ್ತೆ ಜೈಲು ಪಾಲಾಗ್ತಾರಾ ‘ಡೆವಿಲ್’?

Share

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊಲೆ ಕೇಸ್​ನ ಆರೋಪಿಗಳಾದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ಪವಿತ್ರಾ ಗೌಡ, ವಿನಯ್ ಸೇರಿದಂತೆ 17 ಮಂದಿಯನ್ನು ಬಂಧಿಸಿ ಪೊಲೀಸರು ಹಲವು ಆಯಾಮಗಳಲ್ಲಿ ವಿಚಾರಣೆ ನಡೆಸಿದ್ದಾರೆ. ಇಂದಿಗೆ 17 ಆರೋಪಿಗಳ ಪೊಲೀಸ್ ಕಸ್ಟಡಿ ಅಂತ್ಯವಾಗಲಿದ್ದು, ಮಧ್ಯಾಹ್ನದ ನಂತರ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆಯಲ್ಲಿ ದರ್ಶನ್ ಹಾಗೂ ಅವರ ಗ್ಯಾಂಗ್ ಪಾತ್ರ ಮುಖ್ಯವಾಗಿದೆ ಎಂದು ಆರಂಭದಿಂದಲೂ ಕೇಳಿಬರುತ್ತಿದೆ. ಜೂನ್ 11ರ ಮುಂಜಾನೆ ದರ್ಶನ್ ಅವರನ್ನು ಮೈಸೂರಿನ ಬ್ಲೂ ರ್ಯಾಡಿಸನ್ ಹೊಟೇಲ್ ನಲ್ಲಿ ಜಿಮ್ ಮಾಡುತ್ತಿದ್ದವರನ್ನು ಬಂಧಿಸಲಾಯಿತು.

ಆ ಬಳಿಕ ಪವಿತ್ರಾ ಗೌಡ ಸೇರಿ ಹಲವರ ಬಂಧನ ಆಯಿತು. ಅನುಮಾನ ಇರುವ ಎಲ್ಲರನ್ನೂ ಪೊಲೀಸರು ಬಂಧಿಸಿದರು. ಎರಡನೇ ಬಾರಿಗೆ ಪೊಲೀಸ್ ಕಸ್ಟಡಿ ಇಂದಿಗೆ ಅಂತ್ಯ ಆಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ 24 ನೇ ಎಸಿಎಂಎಂ ನ್ಯಾಯಾಲಯದ ಎದುರು ಇಂದು ಆರೋಪಿಗಳನ್ನು ಪೊಲೀಸರು ಹಾಜರುಪಡಿಸಲಿದ್ದಾರೆ.ಪೊಲೀಸ್ ಕಸ್ಟಡಿ ವೇಳೆ ಆರೋಪಿಗಳ ಸ್ವ ಇಚ್ಛಾ ಹೇಳಿಕೆ, ಸ್ಥಳ ಮಹಜರು ಸೇರಿ ಹಲವು ಮಹತ್ವದ ಸಾಕ್ಷ್ಯ ಕಲೆ ಹಾಕಲಾಗಿದೆ. ಆರೋಪಿಗಳು ನ್ಯಾಯಾಂಗ ಬಂಧನಕ್ಕೆ ವಹಿಸುವಂತೆ ಪೊಲೀಸರು ಮನವಿ ಮಾಡುವ ಸಾಧ್ಯತೆಯಿದೆ. ಈ ಮಧ್ಯೆ ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಮುಚ್ಚಿಹಾಕಲು 30 ಲಕ್ಷ ರೂಪಾಯಿ ನೀಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.

ನಿನ್ನೆ ಪೊಲೀಸ್ ಠಾಣೆಗೆ ಪತಿ ದರ್ಶನ್ ನೋಡಲು ಬಂದಿದ್ದ ಪತ್ನಿ ವಿಜಯಲಕ್ಷ್ಮಿಯನ್ನು ಪೊಲೀಸರು ಸತತ 4 ಗಂಟೆ ವಿಚಾರಣೆ ನಡೆಸಿದ್ದರು. ತಮ್ಮ ಮತ್ತು ತಮ್ಮ ಕುಟುಂಬದ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ.

2011ರಲ್ಲಿ ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ಮಾಡಿ ದರ್ಶನ್ ಅವರು ಜೈಲು ಪಾಲಾಗಿದ್ದರು. 14 ದಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಳೆದಿದ್ದರು. ಈ ಬಾರಿ ಜೈಲು ಪಾಲಾದರೆ ಇದು ಚಾಲೆಂಜಿಂಗ್ ಸ್ಟಾರ್ ಜೈಲುವಾಸ ಅನುಭವಿಸುತ್ತಿರುವುದು ಎರಡನೇ ಸಲವಾಗಿದೆ.


Share