ಕೆ.ಆರ್. ಪೇಟೆ:– ಅಕ್ಕಿಹೆಬ್ಬಾಳು ಗ್ರಾಮದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಮತ್ತು ಕೊಂಕಣೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರವಾಸೋದ್ಯಮ ಇಲಾಖೆ ನಿರ್ಮಾಣ ಮಾಡಿದ್ದ ಯಾತ್ರಿ ನಿವಾಸ ಕಟ್ಟಡವು ನಿರ್ವಹಣೆ ಕೊರತೆಯಿಂದ ಪಾಳು ಬಿದ್ದು, ಆವರಣದಲ್ಲಿ ಗಿಡಗಳು ಬೆಳೆದು ಹಾವು ಚೇಳುಗಳ ವಸತಿ ಗೃಹವಾಗಿ ಮಾರ್ಪಟ್ಟಿದೆ.ಪಾಳು ಬಿದ್ದ ಕಟ್ಟಡ ಅಕ್ರಮ ಚಟುವಟಿಕೆಗಳ ತಾಣವಾಗಿದೆ. ಅಲ್ಲದೆ ಕಿಡಿಗೇಡಿಗಳು ಕಟ್ಟಡದ ಕಿಟಕಿ, ಗಾಜುಗಳನ್ನು ಒಡೆದು ಕಟ್ಟಡದೊಳಗೆ ಗಲೀಜು ಮಾಡಿದ್ದಾರೆ. ಸರ್ಕಾರದ ಕೋಟ್ಯಂತರ ರು. ಹಣ ಅಧಿಕಾರಿಗಳ ಕಾರ್ಯಲೋಪದಿಂದ ವ್ಯರ್ಥವಾಗಿದೆ.ಗೌತಮರ ಕ್ಷೇತ್ರವೆಂದು ಪ್ರಸಿದ್ಧವಾದ ಶ್ರೀಲಕ್ಷ್ಮಿನರಸಿಂಹಸ್ವಾಮಿ ಮತ್ತು ಕೊಂಕಣೇಶ್ವರ ದೇವಸ್ಥಾನವು ಹೇಮಾವತಿ ನದಿ ದಂಡೆಯಲ್ಲಿದೆ. ಫೆಬ್ರವರಿ ತಿಂಗಳಿನಲ್ಲಿ ಅದ್ದೂರಿಯಾಗಿ ಜಾತ್ರಾ ಮಹೋತ್ಸವ ನಡೆಯುತ್ತದೆ. ಈ ಕ್ಷೇತ್ರಕ್ಕೆ ನಿತ್ಯವೂ ನೂರಾರು ಭಕ್ತರು ಆಗಮಿಸುತ್ತಾರೆ.ಭಕ್ತರು ಉಳಿದುಕೊಳ್ಳಲು ಸರ್ಕಾರವು ಪ್ರವಾಸೋದ್ಯಮ ಇಲಾಖೆ ಸಹಕಾರದಲ್ಲಿ ಯಾತ್ರಿ ನಿವಾಸ ಕಟ್ಟಡವನ್ನು ನಿರ್ಮಾಣ ಮಾಡಿತ್ತು. ಉದ್ಘಾಟನೆಯಾದ ದಿನ ಬಿಟ್ಟರೆ ನಂತರ ಕಟ್ಟಡದ ಬಾಗಿಲು ತೆರೆದಿಲ್ಲ. ಈ ನಿವಾಸದಲ್ಲಿ ಯಾವ ಯಾತ್ರಿಗಳು ಉಳಿದುಕೊಂಡಿಲ್ಲ. ನಿರ್ವಹಣೆ ಇಲ್ಲದೆ ಗಿಡಗಳು ಬೆಳೆದು ಕಟ್ಟಡ ಹಾಳಾಗುವ ಸ್ಥಿತಿಗೆ ಬಂದು ತಲುಪಿದೆ.ಪ್ರವಾಸೋದ್ಯಮ ಇಲಾಖೆ ಈ ಕಟ್ಟಡದ ಬಗ್ಗೆ ಗಮನ ಹರಿಸಿಲ್ಲ.ದೇವಸ್ಥಾನ ಮುಂಭಾಗದ ಕಲ್ಯಾಣ ಮಂಟಪದಲ್ಲಿ ನಿತ್ಯವೂ ಮದುವೆಗಳು ನಡೆಯುತ್ತವೆ. ಕಟ್ಟಡವು ಚೆನ್ನಾಗಿದ್ದರೆ ಮದುವಗೆ ಬರುವ ಅನೇಕರು ಇಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಆಗಬಹುದಿತ್ತು ಆದರೆ, ಪ್ರವಾಸೋದ್ಯಮ ಇಲಾಖೆ ನಿರ್ಲಕ್ಷ್ಯದಿಂದ ಕಟ್ಟಡವು ಪಾಳು ಬಿದ್ದಿದೆ.ಅನೇಕ ಕಡೆಗಳಲ್ಲಿ ನಿರ್ಮಾಣ ಮಾಡಿರುವ ಯಾತ್ರಿ ನಿವಾಸಗಳು ಹಾಳು ಬಿದ್ದಿವೆ. ಇದರ ಅಗತ್ಯತೆ ಆರಿಯದೆ ಅಧಿಕಾರಿಗಳು ಕೇವಲ ಹಣ ಮಾಡುವ ಉದ್ದೇಶದಿಂದ ಅನಗತ್ಯವಾದ ಕಡೆಗಳಲ್ಲಿ ಯಾತ್ರೆ ನಿವಾಸಗಳನ್ನು ನಿರ್ಮಿಸಿದ್ದಾರೆ. ಇದರಿಂದ ಪ್ರವಾಸೋಧ್ಯಮ ಇಲಾಖೆ ಉದ್ದೇಶ ಈಡೇರದೆ ಸರ್ಕಾರದ ಹಣ ಪೋಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.ಅಲ್ಲದೇ ಅನೈತಿಕ ಚಟುವಟಿಕೆಗಳ ತಾಣವಾಗಿ ಕಿಡಿಗೇಡಿಗಳು ಇಲ್ಲಿರುವ ಕಟ್ಟಡದ ಗಾಜುಗಳನ್ನು ಒಡೆದು ಹಾಕಿದ್ದಾರೆ. ಸರ್ಕಾರ, ಇಲಾಖೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಯಾತ್ರಿನಿವಾಸ ಕಟ್ಟಡವನ್ನು ಅಭಿವೃದಿ ಪಡಿಸಬೇಕು. ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿ ಸರ್ಕಾರದ ಹಣ ಪೋಲಾಗದಂತೆ ಗಮನ ಹರಿಸಬೇಕಿದೆ.ಸರ್ಕಾರ ನಿರ್ಮಿಸಿರುವ ಯಾತ್ರಿ ನಿವಾಸ ಕಟ್ಟಡಗಳನ್ನು ಅಭಿವೃದ್ಧಿ ಮಾಡಿ ಭಕ್ತಾಧಿಗಳು ಉಳಿತುಕೊಳ್ಳವ ವಾತಾವರಣ ಕಲ್ಪಿಸಬೇಕು. ಇದರ ನಿರ್ವಹಣೆಗಾಗಿ ಯಾತ್ರಿ ನಿವಾಸಗಳನ್ನು ಆಯಾ ಗ್ರಾಪಂಗಳಿಗೆ ಹಸ್ತಾಂತರಿಸಬೇಕು. ಅಗತ್ಯವಿಲ್ಲದ ಕಡೆ ಯಾತ್ರಿ ನಿವಾಸಗಳನ್ನು ನಿರ್ಮಿಸುವುದನ್ನು ನಿಲ್ಲಿಸಿ ಸರ್ಕಾರದ ಹಣ ಉಳಿಸಲು ಮುಂದಾಗಬೇಕು.