ನಾಲ್ಕು ವರ್ಷವಾದರೂ ಅಂಗನವಾಡಿ ಕಟ್ಟಡ ಕಾಮಗಾರಿ ಪೂರ್ಣಗೊಳ್ಳದ ಹಿನ್ನಲೆ ಮಕ್ಕಳು ದೇವಾಲಯದ ಆವರಣವನ್ನ ಆಶ್ರಯಿಸಿರುವ ಪ್ರಕರಣ ಹುಣಸೂರು ತಾಲೂಕು ಹುಯಿಲೇಗೌಡನ ಕೊಪ್ಪಲು ಗ್ರಾಮದಲ್ಲಿ ಬೆಳಕಿಗೆ ಬಂದಿದೆ.ಅಂಗನವಾಡಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸುವಂತೆ ಸ್ಥಳೀಯರು ಮಾಡಿದ ಮನವಿಗಳು ನಿರ್ಲಕ್ಷ್ಯಕ್ಕೆ ಒಳಗಾಗಿದೆ.ಸ್ವಂತ ಕಟ್ಟಡ ಇಲ್ಲದ ಪರಿಣಾಮ ದೇವಾಲಯವನ್ನೇ ಅಂಗನವಾಡಿ ಕೇಂದ್ರವಾಗಿ ಬಳಸಿಕೊಳ್ಳಲಾಗುತ್ತಿದೆ.ಸುಮಾರು 8 ಲಕ್ಷ ವೆಚ್ಚದಲ್ಲಿ ಹುಯಿಲೇಗೌಡ ಕೊಪ್ಪಲು ಗ್ರಾಮದ ಮಕ್ಕಳಿಗಾಗಿ ಅಂಗನವಾಡಿ ಕೇಂದ್ರಕ್ಕೆ ಕಟ್ಟಡ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರ ಅರ್ಧಕ್ಕೇ ಕೈ ಬಿಟ್ಟಿದ್ದಾನೆ.ಈಗಾಗಲೇ ನಾಲ್ಕು ವರ್ಷ ಕಳೆದರೂ ಕಟ್ಟಡಕ್ಕೆ ಪೂರ್ಣಣವಾಗುವ ಭಾಗ್ಯ ದೊರೆತಿಲ್ಲ.ಸ್ಥಳೀಯರು ಹಾಲಿ ಶಾಸಕರಿಗೆ ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.ಸುಮಾರು 10 ಮಕ್ಕಳು ಅಂಗನವಾಡಿ ಕೇಂದ್ರದ ಪ್ರಯೋಜನ ಪಡೆಯುತ್ತಿದ್ದಾರೆ.ದೇವಾಲಯದ ಒಂದು ಭಾಗದಲ್ಲಿ ಮಕ್ಕಳಿಗೆ ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತಿವೆ.ಭಕ್ತರು ಪೂಜೆಗೆ ಬಂದಲ್ಲಿ ಮಕ್ಕಳನ್ನ ಹೊರಗೆ ಕಳುಹಿಸಿ ಪೂಜೆ ನಂತರ ಒಳಗೆ ಕರೆಸಿಕೊಳ್ಳುವಂತಾಗಿದೆ.ಇದರಿಂದಾಗಿ ಮಕ್ಕಳ ಪ್ರಗತಿಗೆ ಕುಂಟಿತವಾಗುವ ಸಾಧ್ಯತೆ ಹೆಚ್ಚಾಗಿದೆ.ಕೂಡಲೇ ಅಂಗನವಾಡಿಗಾಗಿ ಮೀಸಲಾಗಿ ಶುರುವಾದ ಸ್ವಂತಕಟ್ಟಡದ ಕಾಮಗಾರಿ ಪೂರ್ಣಗೊಳಿಸಿ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ ಪ್ರಗತಿಗೆ ಸಹಕರಿಸಬೇಕೆಂದು ಗ್ರಾಮದ ಮುಖಂಡರು ಒತ್ತಾಯಿಸಿದ್ದಾರೆ.