ಅಂಚೆ ಅಪಘಾತ ವಿಮೆ; ಅಭಿಯಾನಕ್ಕೆ ಅಭೂತಪೂರ್ವ ಪ್ರತಿಕ್ರಿಯೆ, ಪ್ರತಿದಿನ ಸರಾಸರಿ 5,000 ಜನರು ನೋಂದಣಿ

ಅಂಚೆ ಅಪಘಾತ ವಿಮೆ; ಅಭಿಯಾನಕ್ಕೆ ಅಭೂತಪೂರ್ವ ಪ್ರತಿಕ್ರಿಯೆ, ಪ್ರತಿದಿನ ಸರಾಸರಿ 5,000 ಜನರು ನೋಂದಣಿ

Share

ಬೆಂಗಳೂರು: ಅಂಚೆ ಇಲಾಖೆಯ ವೈಯಕ್ತಿಕ ಅಪಘಾತ ಯೋಜನೆಯಡಿ ಹೆಚ್ಚಿನ ಜನರನ್ನು ನೋಂದಾಯಿಸಲು ಇತ್ತೀಚೆಗೆ ನಡೆಸಿದ ಅಭಿಯಾನಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಂಚೆ ಇಲಾಖೆಯ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಮೂಲಕ ಪ್ರತಿದಿನ ಸರಾಸರಿ 5,000 ಜನರು ಈ ಯೋಜನೆ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ.

‘ಗ್ರೂಪ್ ಪರ್ಸನಲ್ ಆಕ್ಸಿಡೆಂಟ್ ಗಾರ್ಡ್’ ಯೋಜನೆಯನ್ನು ಜನಪ್ರಿಯಗೊಳಿಸಲು ಅಭಿಯಾನ ಕೈಗೊಳ್ಳಲಾಗಿದೆ. ಇದಕ್ಕಾಗಿ ಐಪಿಪಿಬಿ ಖಾತೆಯನ್ನು ಹೊಂದಿರುವುದು ಕಡ್ಡಾಯವಾಗಿದೆ.

ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್‌ಮಾಸ್ಟರ್ ಜನರಲ್ ಎಸ್ ರಾಜೇಂದ್ರ ಕುಮಾರ್ ಮಾತನಾಡಿ, ಈ ಯೋಜನೆಯು ರಾಜ್ಯದ ಎಲ್ಲ ಅಂಚೆ ಕಚೇರಿಗಳಲ್ಲಿ ಲಭ್ಯವಿದ್ದು, ಪೋಸ್ಟ್‌ಮ್ಯಾನ್ ಮೂಲಕ ಮನೆ ಬಾಗಿಲಿಗೂ ತಲುಪಿಸಲಾಗುತ್ತದೆ. ವರ್ಷಕ್ಕೆ 520 ರೂ. ವಿಮಾ ಕಂತು ಪಾವತಿಸಿದರೆ 10 ಲಕ್ಷ ರೂ. ಅಪಘಾತ ವಿಮೆ ಮತ್ತು 749 ರೂ. ಪಾವತಿಸಿದರೆ 15 ಲಕ್ಷ ರೂ. ವಿಮಾ ಮೊತ್ತದ ಸೌಲಭ್ಯ ದೊರಕಲಿದೆ ಎಂದು ಹೇಳಿದರು.

TATA AIG, ಆದಿತ್ಯ ಬಿರ್ಲಾ ಜೀವ ವಿಮೆ ಮತ್ತು ಬಜಾಜ್ ವಿಮೆ ಈ ಯೋಜನೆಯ ಪಾಲುದಾರರಾಗಿದ್ದಾರೆ. ಈ ಆರ್ಥಿಕ ವರ್ಷದಲ್ಲಿ 20,000ಕ್ಕೂ ಹೆಚ್ಚು ಜನರು ಈ ಯೋಜನೆ ಅಡಿಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಗುರುವಾರವೊಂದೇ ದಿನ (ಜೂನ್ 12), 6,531 ವ್ಯಕ್ತಿಗಳು ನೋಂದಾಯಿಸಿದ್ದರೆ, ಶುಕ್ರವಾರ (ಜೂನ್ 14) 12,186 ಜನರು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದರು.ಈ ಯೋಜನೆ ಆರಂಭವಾದಾಗಿನಿಂದ ಕರ್ನಾಟಕದಲ್ಲಿ 4.5 ಲಕ್ಷ ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ. ಸಾವಿಗೆ ಸಂಬಂಧಿಸಿದ ಒಟ್ಟು 66 ಕ್ಲೈಮ್‌ಗಳನ್ನು ಪ್ರಕ್ರಿಯೆಗೊಳಿಸಲಾಗಿದೆ ಮತ್ತು ವೈದ್ಯಕೀಯ ಮರುಪಾವತಿಗೆ ಸಂಬಂಧಿಸಿದ ಒಟ್ಟು 256 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ದಿನದಿಂದ ದಿನಕ್ಕೆ ಸಂಖ್ಯೆಗಳು ಹೆಚ್ಚಾಗುತ್ತಿವೆ’ ಎಂದು ಸಿಪಿಎಂಜಿ ಮಾಹಿತಿ ನೀಡಿದೆ.

ವಿಮಾ ಸೌಲಭ್ಯ ಪಡೆಯಲು ಬಯಸುವವರು ಆಧಾರ ಜೋಡಣೆ ಮಾಡಿದ ಶಿಲ್ಕು ರಹಿತ ಡಿಬಿಟಿ ಖಾತೆ ತೆರೆಯಬಹುದು. ಈ ಯೋಜನೆಯು ವಾರ್ಷಿಕವಾಗಿ ಸ್ವಯಂ ನವೀಕರಣಗೊಳ್ಳುತ್ತದೆ.


Share