ವಯನಾಡ್ ಲೋಕಸಭಾ ಕ್ಷೇತ್ರದ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

ವಯನಾಡ್ ಲೋಕಸಭಾ ಕ್ಷೇತ್ರದ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

Share

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇರಳದ ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದು, ಉತ್ತರ ಪ್ರದೇಶದ ರಾಯ್ಬರೇಲಿ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ ಎಂದು ಲೋಕಸಭೆಯ ಸಚಿವಾಲಯ ಮಂಗಳವಾರ ತಿಳಿಸಿದೆ.

ಜೂನ್ 18 ರಿಂದ ಜಾರಿಗೆ ಬರುವಂತೆ ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ ಎಂದು ಲೋಕಸಭೆಯ ಬುಲೆಟಿನ್ ತಿಳಿಸಿದೆ.ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ರಾಷ್ಟ್ರ ರಾಜಧಾನಿಯಲ್ಲಿರುವ ತಮ್ಮ ನಿವಾಸದಲ್ಲಿ ಪಕ್ಷದ ವರಿಷ್ಠರೊಂದಿಗೆ ಚರ್ಚೆ ನಡೆಸಿದ ನಂತರ ಎರಡು ಸ್ಥಾನಗಳ ಪೈಕಿ ಯಾವ ಕ್ಷೇತ್ರವನ್ನು ಉಳಿಸಿಕೊಳ್ಳಬೇಕು ಎನ್ನುವ ಕುರಿತಾದ ನಿರ್ಧಾರವನ್ನು ಸೋಮವಾರ ಪ್ರಕಟಿಸಿದ್ದರು.

ರಾಹುಲ್ ಗಾಂಧಿ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ವಯನಾಡ್ ಲೋಕಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಚುನಾವಣಾ ರಾಜಕೀಯಕ್ಕೆ ಪದಾರ್ಪಣೆ ಮಾಡಲಿದ್ದಾರೆ.

ರಾಹುಲ್ ಗಾಂಧಿ ಅವರು ಗೆದ್ದಿದ್ದ ಎರಡು ಸ್ಥಾನಗಳಲ್ಲಿ ಒಂದಕ್ಕೆ ರಾಜೀನಾಮೆ ನೀಡಿದ ನಂತರ, ಸಂಸತ್ತಿನ ಕೆಳಮನೆಯಲ್ಲಿ ಕಾಂಗ್ರೆಸ್‌ ಸಂಸದರ ಸಂಖ್ಯೆ ಈಗ 98 ಆಗಿದೆ. ಇದೀಗ ರಚನೆಯಾದ 18ನೇ ಲೋಕಸಭೆಯಲ್ಲಿ ಇದು ಮೊದಲ ಖಾಲಿ ಹುದ್ದೆಯಾಗಿದೆ.

‘ಕೇರಳದ ವಯನಾಡ್ ಮತ್ತು ಉತ್ತರ ಪ್ರದೇಶದ ರಾಯ್ ಬರೇಲಿ ಸಂಸದೀಯ ಕ್ಷೇತ್ರಗಳಿಂದ ಲೋಕಸಭೆಗೆ ಚುನಾಯಿತರಾದ ರಾಹುಲ್ ಗಾಂಧಿ ಅವರು ಲೋಕಸಭೆಯ ಕೇರಳದ ವಯನಾಡ್ ಸಂಸದೀಯ ಕ್ಷೇತ್ರದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಜೂನ್ 18 ರಿಂದ ಜಾರಿಗೆ ಬರುವಂತೆ ಅವರ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸಿದ್ದಾರೆ’ ಎಂದು ಲೋಕಸಭೆಯ ಬುಲೆಟಿನ್ ತಿಳಿಸಿದೆ.ಒಂದು ವೇಳೆ ಪ್ರಿಯಾಂಕಾ ಗಾಂಧಿ ವಯನಾಡ್‌ನಿಂದ ಆಯ್ಕೆಯಾದರೆ, ಇದೇ ಮೊದಲ ಬಾರಿಗೆ ಗಾಂಧಿ ಕುಟುಂಬದ ಮೂವರು ಸದಸ್ಯರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಒಟ್ಟಿಗೆ ಸಂಸತ್ತಿನಲ್ಲಿ ಇರಲಿದ್ದಾರೆ. ಸೋನಿಯಾ ಗಾಂಧಿ ಈಗ ರಾಜ್ಯಸಭಾ ಸದಸ್ಯೆಯಾಗಿದ್ದಾರೆ.

ಚುನಾವಣಾ ಕಾನೂನುಗಳಲ್ಲಿ 1996 ರ ತಿದ್ದುಪಡಿಯ ಮೊದಲು, ಒಬ್ಬ ವ್ಯಕ್ತಿಯು ಸ್ಪರ್ಧಿಸಬಹುದಾದ ಸ್ಥಾನಗಳ ಸಂಖ್ಯೆಗೆ ಯಾವುದೇ ನಿರ್ಬಂಧವಿರಲಿಲ್ಲ. ಅಭ್ಯರ್ಥಿಯು ಎರಡು ಸ್ಥಾನಗಳಿಂದ ಗೆದ್ದರೆ, ಅವರು ಚುನಾವಣೆಯ 14 ದಿನಗಳಲ್ಲಿ ಒಂದನ್ನು ತ್ಯಜಿಸಬೇಕು ಅಥವಾ ಎರಡೂ ಸ್ಥಾನಗಳನ್ನು ಕಳೆದುಕೊಳ್ಳುವ ಸಾಧ್ಯತೆಯನ್ನು ಎದುರಿಸಬೇಕಾಗುತ್ತದೆ.

ಗೆದ್ದಿರುವ ಅಭ್ಯರ್ಥಿಗಳು ಜೂನ್ 24 ಮತ್ತು 25 ರಂದು ಲೋಕಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಹೊಸ ಲೋಕಸಭೆಯ ಮೊದಲ ಅಧಿವೇಶನ ಜೂನ್ 24 ರಂದು ಪ್ರಾರಂಭವಾಗುತ್ತದೆ.


Share