ಕೋಲಾರ: ಅನಾರೋಗ್ಯದಿಂದ ಬಳಲುತ್ತಿದ್ದ ಯಡಿಯೂರು ಸಿದ್ದಲಿಂಗೇಶ್ವರ ದೇವಾಲಯದಲ್ಲಿದ್ದ 75 ವರ್ಷದ ಗಂಗಾಶ್ರೀ ಆನೆಯು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ ಎಂದು ತಿಳಿದುಬಂದಿದೆ.
ತಾಲೂಕಿನ ಕಾಜಿಕಲ್ಲಹಳ್ಳಿ ಬಳಿ ಇರುವ ಆನೆ ಪುನರ್ವಸತಿ ಕೇಂದ್ರದಲ್ಲಿದ್ದ ಗಂಗಾಶ್ರೀ ಆನೆ ಮೃತಪಟ್ಟಿದೆ. 75 ವರ್ಷದ ಗಂಗಾಶ್ರೀ ಆನೆಯು ಅನಾರೋಗ್ಯದಿಂದ ಬಳಲುತ್ತಿತ್ತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ.
ಯಡಿಯೂರು ಸಿದ್ದಲಿಂಗೇಶ್ವರ ದೇವಾಲಯದಲ್ಲಿದ್ದ ಗಂಗಾಶ್ರೀ ಆನೆಗೆ ಅನಾರೋಗ್ಯ ಉಂಟಾಗಿತ್ತು. ಹೀಗಾಗಿ ಕೋಲಾರಕ್ಕೆ ಮೂರು ತಿಂಗಳ ಹಿಂದೆ ಚಿಕಿತ್ಸೆಗಾಗಿ ಕರೆತರಲಾಗಿತ್ತು. ಕಳೆದ ಮೂರು ತಿಂಗಳಿಂದ ಕೋಲಾರ ತಾಲೂಕಿನ ಖಾಜಿಕಲ್ಲಹಳ್ಳಿ ಗ್ರಾಮದ ಬಳಿ ಇರುವ ಆನೆಗಳ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ 75 ವರ್ಷದ ಗಂಗಾಶ್ರೀ ಮೃತಪಟ್ಟಿದೆ.ಆನೆಯ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ಬಳಿಕ ಪುನರ್ವಸತಿ ಕೇಂದ್ರ ಮುಖ್ಯಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸಮ್ಮುಖದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.
1996ರಲ್ಲಿ ಗದುಗಿನ ಮಠದ ಸ್ವಾಮೀಜಿಯೊಬ್ಬರು ಯಡಿಯೂರು ದೇವಾಲಯಕ್ಕೆ ಗಂಗಾಶ್ರೀ ಆನೆಯನ್ನು ಕೊಡುಗೆಯಾಗಿ ನೀಡಿದ್ದರು. ಅಂದಿನ ಸಿಎಂ ಆಗಿದ್ದ ಜೆಹೆಚ್ ಪಟೇಲ್ ಅವರು ಸರ್ಕಾರದ ವತಿಯಿಂದ ಸ್ವೀಕರಿಸಿ ದೇವಾಲಯಕ್ಕೆ ಹಸ್ತಾಂತರ ಮಾಡಿದ್ದರು. 28 ವರ್ಷಗಳಿಂದ ಯಡಿಯೂರು ಮಠದಲ್ಲಿಯೇ ಆನೆ ಇತ್ತು. ಆದರೆ ಇತ್ತೀಚೆಗೆ ಹೆಣ್ಣಾನೆಗೆ ಅನಾರೋಗ್ಯ ಕಾಡಿದ್ದು ಆನೆಯನ್ನು ಚಿಕಿತ್ಸೆ ನೀಡುವ ಸಲುವಾಗಿ ಕೋಲಾರದ ಆನೆಗಳ ಆರೈಕೆ ಕೇಂದ್ರಕ್ಕೆ ಕರೆತರಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆನೆ ಮೃತಪಟ್ಟಿದೆ.