ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಪವಿತ್ರಾ ಗೌಡ ಮಂಗಳವಾರ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ, ಬಳಿಕ ಪೊಲೀಸ್ ಠಾಣೆಗೆ ಕರೆತರಲಾಗಿದೆ.
ಅನ್ನಪೂರ್ಣೇಶ್ವರಿನಗರ ಪೊಲೀಸ ಠಾಣೆಯಲ್ಲಿ ಕೊಲೆ ಪ್ರಕರಣದ ಆರೋಪಿಗಳ ವಿಚಾರಣೆ ಮುಂದುವರೆದಿದೆ. ಮಂಗಳವಾರ ಪವಿತ್ರಾ ಗೌಡ ಅವರ ದೇಹದಲ್ಲಿ ಗ್ರೂಕೋಸ್ ಪ್ರಮಾಣ ಕಡಿಮೆಯಾಗಿದ್ದ ಹಿನ್ನೆಲೆಯಲ್ಲಿ ಅಸ್ವಸ್ಥಗೊಂಡಿದ್ದರು.
ಕೂಡಲೇ ಪೊಲೀಸರು ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಈ ವೇಳೆ ವೈದ್ಯರು ಆಕೆಯ ಆರೋಗ್ಯ ತಪಾಸಣೆ ನಡೆಸಿ ಐವಿ ಫ್ಲ್ಯೂಯೆಡ್ ಹಾಕಿದ್ದಾರೆ. ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ಮೇರೆಗೆ ಪೊಲೀಸರು ಆಕೆಯನ್ನು ಮತ್ತೆ ಠಾಣೆಗೆ ಕರೆತಂದಿದ್ದಾರೆ.ಸಿಸಿಟಿವಿ ದೃಶ್ಯಾವಳಿ ಆಧರಿಸಿ ದರ್ಶನ್, ಪವಿತ್ರಗೌಡ ಬಂಧನ
ಈ ನಡುವೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಬಲ ಸಾಕ್ಷಿಯಾದ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ದರ್ಶನ್ ಹಾಗೂ ಪವಿತ್ರ ಗೌಡ ಅವರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ರಘು ಮತ್ತು ಆತನ ತಂಡ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಅಪಹರಣ ಮಾಡಿದ ಬಳಿಕ ಬೆಂಗಳೂರಿಗೆ ಕರೆತಂದು ಪಟ್ಟಣಗೆರೆ ಶೆಡ್ಗೆ ಕರೆದೊಯ್ದ ನಂತರ ಶೆಡ್ನಲ್ಲಿ ದರ್ಶನ್ ಮತ್ತು ಆತನ ತಂಡ ಹಲ್ಲೆ ನಡೆಸಿರುವ ದೃಶ್ಯ ಶೆಡ್ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ದರ್ಶನ್ ಮತ್ತು ಪವಿತ್ರಾ ಗೌಡ ಅವರು ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿರುವುದಕ್ಕೆ ಸಂಬಂಧಿಸಿದಂತೆ ಪ್ರಬಲ ಸಾಕ್ಷ್ಯಾಧಾರಗಳು ಸಿಕ್ಕಿವೆ. ರೇಣುಕಾಸ್ವಾಮಿ ಮೃತದೇಹ ಪತ್ತೆಯಾಗುತ್ತಿದ್ದಂತೆ ಮೊದಲು ನಾಲ್ವರು ಆರೋಪಿಗಳು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಹೋಗಿ ಶರಣಾದರು. ಈ ನಾಲ್ವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿ ಯಾರ್ಯಾರು ಈ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕಿದಾಗ ದರ್ಶನ್ ಮತ್ತು ಪವಿತ್ರಾ ಗೌಡ ಹೆಸರು ಕೇಳಿಬಂದಿದೆ. ಇತರೆ ಆರೋಪಿಗಳ ಮಾಹಿತಿ ಹಾಗೂ ಸಿಸಿಟಿವಿ ಪುಟೇಜ್ಗಳು, ಮತ್ತಿತರ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿದಾಗ ದರ್ಶನ್ ಮತ್ತು ಪವಿತ್ರ ಇಬ್ಬರೂ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿರುವುದು ಗೊತ್ತಾಗಿದೆ.
ಇಬ್ಬರು ಒಟ್ಟಿಗೆ ಶೆಡ್ಗೆ ಹೋಗಿರುವುದು ಹಾಗೂ ಒಟ್ಟಿಗೆ ಹೊರಬಂದಿರುವುದು ತನಿಖೆಯಿಂದ ಗೊತ್ತಾಗಿದೆ. ಪಟ್ಟಣಗೆರೆ ಶೆಡ್ನಲ್ಲಿ ಅಳವಡಿಸಿರುವ ಸಿಸಿಟಿವಿಯು ಈ ಪ್ರಕರಣಕ್ಕೆ ಪ್ರಮುಖ ಸಾಕ್ಷಿಯಾಗಲಿದೆ.
ರೇಣುಕಾಸ್ವಾಮಿಗೆ ಬಹಳ ಹಿಂಸೆ ನೀಡಿ ಎಲೆಕ್ಟ್ರಿಕ್ ಶಾಕ್ ಕೊಟ್ಟು ಭೀಕರವಾಗಿ ಹತ್ಯೆ ಮಾಡಿರುವುದು ಕಂಡುಬಂದಿದೆ. ಇದೆಲ್ಲದರ ವಿಡಿಯೋ ಹಾಗೂ ತಾಂತ್ರಿಕ, ಪೂರಕ ಸಾಕ್ಷಿಗಳು ದೊರೆತಿರುವ ಹಿನ್ನಲೆಯಲ್ಲಿ ದರ್ಶನ್ ಮತ್ತು ಪವಿತ್ರಾ ಗೌಡನನ್ನು ಈ ಪ್ರಕರಣದಲ್ಲಿ ಪ್ರಮುಖ ಆರೋಪಿಗಳನ್ನಾಗಿ ಮಾಡಲಾಗಿದೆ ಎಂದು ವಿವರಿಸಿದ್ದಾರೆ.