ರೇಣುಕಾಸ್ವಾಮಿ ಹತ್ಯೆಯಾದ ದಿನ ದರ್ಶನ್‌ ಧರಿಸಿದ್ದ ಶೂ ಪತ್ನಿ ವಿಜಯಲಕ್ಷ್ಮೀ ಮನೆಯಲ್ಲಿ ಪತ್ತೆ!

ರೇಣುಕಾಸ್ವಾಮಿ ಹತ್ಯೆಯಾದ ದಿನ ದರ್ಶನ್‌ ಧರಿಸಿದ್ದ ಶೂ ಪತ್ನಿ ವಿಜಯಲಕ್ಷ್ಮೀ ಮನೆಯಲ್ಲಿ ಪತ್ತೆ!

Share

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿರುವ ಪೊಲೀಸರು, ಹತ್ಯೆ ದಿನ ನಟ ದರ್ಶನ್ ಧರಿಸಿದ್ದ ಶೂವನ್ನು ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಮನೆಯಲ್ಲಿ ಪತ್ತೆಯಾಗಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.

ವಿಚಾರಣೆ ವೇಳೆ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಹೊಸಕೆರೆಹಳ್ಳಿಯಲ್ಲಿರುವ ವಿಜಯಲಕ್ಷ್ಮೀ ಅವರ ಮನೆಯಲ್ಲಿ ದರ್ಶನ್‌ ಶೂಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಪಟ್ಟಣಗೆರೆಯ ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ನಟ ದರ್ಶನ್‌ ಸೇರಿದಂತೆ ಇತರೆ ಆರೋಪಿಗಳು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೈದಿದ್ದರು. ಬಳಿಕ ದರ್ಶನ್‌ ಶೆಡ್‌ನಿಂದ ನೇರವಾಗಿ ರಾಜರಾಜೇಶ್ವರಿನಗರದಲ್ಲಿರುವ ತನ್ನ ಮನೆಗೆ ತೆರಳಿ ಬಟ್ಟೆ ಹಾಗೂ ಶೂಗಳನ್ನು ಬದಲಿಸಿ ಸ್ನಾನ ಮಾಡಿಕೊಂಡು ಮೈಸೂರಿಗೆ ತೆರಳಿದ್ದರು ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ.ಮನೆಯ ಕೆಲಸಗಾರ ಆ ಶೂಗಳನ್ನು ಹೊಸಕೆರೆಯಹಳ್ಳಿಯ ವಿಜಯಲಕ್ಷ್ಮೀ ಅವರ ಮನೆಗೆ ತೆಗೆದುಕೊಂಡು ಹೋಗಿ ಇರಿಸಿದ್ದ. ಪೊಲೀಸರು ಸ್ಥಳ ಮಹಜರು ವೇಳೆ ರಾಜರಾಜೇಶ್ವರಿನಗರದ ದರ್ಶನ್‌ ಮನೆಯಲ್ಲಿ ಕೊಲೆ ದಿನ ದರ್ಶನ್‌ ಧರಿಸಿದ್ದ ಬಟ್ಟೆಗಳನ್ನು ಜಪ್ತಿ ಮಾಡಿದ್ದರು. ಆದರೇ, ಶೂಗಳು ಮಾತ್ರ ಸಿಕ್ಕಿರಲಿಲ್ಲ.

ಈ ಬಗ್ಗೆ ಆರೋಪಿಗಳನ್ನು ವಿಚಾರಣೆ ಮಾಡಿದಾಗ ದರ್ಶನ್‌ ಮನೆಯ ಕೆಲಸಗಾರ ಆ ಶೂಗಳನ್ನು ವಿಜಯಲಕ್ಷ್ಮೀ ಮನೆಗೆ ತೆಗೆದುಕೊಂಡು ಹೋಗಿರುವುದು ಗೊತ್ತಾಗಿದೆ. ಬಳಿಕ ಪೊಲೀಸರು ವಿಜಯಲಕ್ಷ್ಮೀ ಮನೆಗೆ ತೆರಳಿ ಆ ಶೂಗಳನ್ನು ಜಪ್ತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.


Share