ಬೆಂಗಳೂರು: ಸುದ್ದಿ ಮಾಡಲು ತೆರಳಿದ್ದ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಗಾರ ಟಿಟಿ ರಕ್ಷಿತ್ ಗೌಡ ಅವರ ಮೇಲೆ ನಾಲ್ವರು ಅಪರಿಚಿತ ವ್ಯಕ್ತಿಗಳ ತಂಡವು ಕೋರ್ಟ್ ಹಾಲ್ ಹೊರಗೆ ದಾಳಿ ಮಾಡಿ, ಅವರ ಮೊಬೈಲ್ ಫೋನ್ ದೋಚಿದ ಘಟನೆಗೆ ಬಿಜೆಪಿ ತೀವ್ರ ಖಂಡನೆ ವ್ಯಕ್ತಪಡಿಸಿದೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಒಕ್ಕೂಟ (ಕೆಯುಡಬ್ಲ್ಯುಜೆ) ಕೂಡ ರಕ್ಷಿತ್ ಗೌಡ (23) ಅವರ ಮೇಲಿನ ಹಲ್ಲೆ ಘಟನೆಯನ್ನು ಖಂಡಿಸಿದೆ.
‘X’ ಖಾತೆಯಲ್ಲಿ ಪೋಸ್ಟ್ ಮಾಡಿರುವ ಒಕ್ಕೂಟ, ನಟ ದರ್ಶನ್ ಅವರನ್ನು ಹಾಜರುಪಡಿಸಿದ ನ್ಯಾಯಾಲಯದ ಹೊರಗೆ ಇದ್ದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿಗಾರ ರಕ್ಷಿತ್ ಗೌಡ ಅವರನ್ನು 4 ಅಪರಿಚಿತ ವ್ಯಕ್ತಿಗಳು ಥಳಿಸಿದ್ದಾರೆ. ಈ ಘಟನೆಯನ್ನು ಕೆಯುಡಬ್ಲ್ಯುಜೆ ಖಂಡಿಸುತ್ತದೆ ಎಂದು ಹೇಳಿದೆ.ಪ್ರತಿಪಕ್ಷದ ನಾಯಕ ಆರ್.ಅಶೋಕ ಮಾತನಾಡಿ, ನಗರದ ನ್ಯಾಯಾಲಯದಲ್ಲಿ ಮಾಧ್ಯಮದವರ ಮೇಲೆ ನಡೆದ ಹಲ್ಲೆ ಅತ್ಯಂತ ಖಂಡನೀಯ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಮಾಧ್ಯಮಗಳು ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ತಂಭವಾಗಿದ್ದು, ಪತ್ರಿಕಾ ಸ್ವಾತಂತ್ರ್ಯವನ್ನು ಕಸಿಯುವ ಯಾವುದೇ ಪ್ರಯತ್ನವನ್ನು ಸರ್ಕಾರ ಸಹಿಸಬಾರದು ಎಂದು ಹೇಳಿದರು.
ಬಿಜೆಪಿಯ ಹಿರಿಯ ನಾಯಕ ಹಾಗೂ ಶಾಸಕ ಸುರೇಶ್ ಕುಮಾರ್ ಕೂಡ ಘಟನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.