ನ್ಯೂಯಾರ್ಕ್: ಅಮೆರಿಕಾದಲ್ಲಿ ಖಲಿಸ್ತಾನಿ ನಾಯಕನನ್ನು ಕೊಲ್ಲುವ ಸಂಚಿನಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಭಾರತೀಯ ಉದ್ಯಮಿ ನಿಖಿಲ್ ಗುಪ್ತಾ ಸೋಮವಾರ ಇಲ್ಲಿನ ಫೆಡರಲ್ ನ್ಯಾಯಾಲಯಕ್ಕೆ ಹಾಜರಾಗಿದ್ದು, ಈ ವೇಳೆ ತಮ್ಮ ವಕೀಲರ ಮೂಲಕ ತಾನು ನಿರ್ದೋಷಿ ಎಂದು ಹೇಳಿಕೊಂಡಿದ್ದಾರೆಂದು ತಿಳಿದುಬಂದಿದೆ.
ಅಮೆರಿಕಾ ಮನವಿ ಮೇರೆಗೆ ಕಳೆದ ವರ್ಷವೇ ಜೆಕ್ ರಿಪಬ್ಲಿಕ್‌ನಲ್ಲಿ ನಿಖಿಲ್ ಗುಪ್ತಾ ಅವರನ್ನು ಬಂಧಿಸಲಾಗಿತ್ತು. ಭಾನುವಾರ ಅವರನ್ನು ಅಮೆರಿಕಾಕ್ಕೆ ಹಸ್ತಾಂತರಿಸಲಾಗಿತ್ತು. ತಮ್ಮ ಹಸ್ತಾಂತರ ಪ್ರಶ್ನಿಸಿ ಗುಪ್ತಾ ಸಲ್ಲಿಸಿದ್ದ ಅರ್ಜಿಯನ್ನು ಜೆಕ್ ನ್ಯಾಯಾಲಯವು ಕಳೆದ ತಿಂಗಳು ತಿರಸ್ಕರಿಸಿತ್ತು.
ಗುಪ್ತಾ ಅವರನ್ನು ಸೋಮವಾರ ಅಮೆರಿಕ ಫೆಡರಲ್ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಈ ವೇಳೆ ಅವರು ತಾವು ತಪ್ಪಿತಸ್ಥರಲ್ಲ ಎಂದು ಹೇಳಿರುವುದಾಗಿ ಅವರ ವಕೀಲ ಜೆಫ್ರಿ ಚಾಬ್ರೋವ್ ಹೇಳಿದ್ದಾರೆ.
ಹೆಸರು ಬಹಿರಂಗಪಡಿಸದ ಭಾರತದ ಸರ್ಕಾರಿ ಅಧಿಕಾರಿ ನಿರ್ದೇಶನದಂತೆ ಗುಪ್ತಾ ಕೆಲಸ ಮಾಡಿದ್ದಾರೆ ಎಂದು ಅಮೆರಿಕದ ಫೆಡರಲ್ ಪ್ರಾಸಿಕ್ಯೂಟರ್ ಆರೋಪಿಸಿದ್ದಾರೆ. ಅವರ ಸೂಚನೆ ಮೇರೆಗೆ ಪನ್ನು ಹತ್ಯೆಗೆ ವ್ಯಕ್ತಿಯೊಬ್ಬನಿಗೆ ಸುಪಾರಿ ಕೊಟ್ಟಿದ್ದ ಗುಪ್ತಾ, ಮುಂಗಡವಾಗಿ 15 ಸಾವಿರ ಡಾಲರ್ ಹಣವನ್ನೂ ನೀಡಿದ್ದರು ಎಂದು ಆರೋಪಿಸಿದ್ದಾರೆ. ಆದರೆ, ಭಾರತ ಈ ಆರೋಪಗಳನ್ನು ತಳ್ಳಿಹಾಕಿದ್ದು, ಉನ್ನತಮಟ್ಟದ ತನಿಖೆಗೆ ನಿರ್ದೇಶಿಸಿದೆ.ಇದು ನಮ್ಮ ಎರಡೂ ದೇಶಗಳಿಗೆ ಸಂಕೀರ್ಣವಾದ ವಿಷಯವಾಗಿದೆ. ವಿಚಾರಣೆ ಪ್ರಕ್ರಿಯೆಯ ಆರಂಭದಲ್ಲಿ ನಾವು ಯಾವುದೇ ತೀರ್ಮಾನಗಳಿಗೆ ಬರುವುದು ಸೂಕ್ತವಲ್ಲ ಎಂದು ಗುಪ್ತಾ ಅವರ ವಕೀಲ ಚಾಬ್ರೋವ್ ತಿಳಿಸಿದ್ದಾರೆ.
ಗುಪ್ತಾ ಅವರು ಸಸ್ಯಾಹಾರಿ ಆಗಿರುವ ಕಾರಣ ಅವರಿಗೆ ಸರಿಯಾಗಿ ಆಹಾರ ತಿನ್ನಲು ಸಾಧ್ಯವಾಗುತ್ತಿಲ್ಲ ಮತ್ತು ಸೂಕ್ತ ಆಹಾರ ಕೂಡ ಲಭ್ಯವಿಲ್ಲ. ಜೊತೆಗೆ ಅವರಿಗೆ ಪ್ರಾರ್ಥನೆ ಮಾಡಲು ಸೌಲಭ್ಯಗಳ ಅಗತ್ಯವಿದೆ ಎಂದು ಹೇಳಿದರು.
ದೆಹಲಿ ಮೂಲದ ಉದ್ಯಮಿ ನಿಖಿಲ್ ಗುಪ್ತಾನನ್ನು ಕಳೆದ ವರ್ಷ ಅಂದರೆ 2023ರಲ್ಲಿ ಜೆಕ್ ಗಣರಾಜ್ಯದಲ್ಲಿ ಬಂಧಿಸಲಾಗಿತ್ತು. ಸಿಖ್ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್‌ನನ್ನು ಕೊಲ್ಲಲು ಸಂಚು ರೂಪಿಸಿದ ಆರೋಪವನ್ನು ಅಮೆರಿಕ ಆತನ ಮೇಲೆ ಹೊರಿಸಿದೆ. ನಿಖಿಲ್ ಗುಪ್ತಾ ಭಾರತದ ಸರ್ಕಾರಿ ಏಜೆಂಟ್‌ನೊಂದಿಗೆ ಸಂಚಿನಲ್ಲಿ ಭಾಗಿಯಾಗಿದ್ದಾನೆ ಮತ್ತು ಪನ್ನುನ್‌ನನ್ನು ಕೊಲ್ಲಲು ಒಬ್ಬ ಹಿಟ್‌ಮ್ಯಾನ್ ಅನ್ನು ನೇಮಿಸಿಕೊಂಡಿದ್ದಾನೆ ಎಂದು ಅಮೆರಿಕಾ ಹೇಳಿದೆ.
ಆರೋಪಗಳು ತುಂಬಾ ಗಂಭೀರವಾಗಿರುವುದರಿಂದ ತನಿಖಾ ಸಮಿತಿಯನ್ನು ರಚಿಸಲಾಗಿದ್ದು, ವಿಚಾರವನ್ನು ಪರಿಶೀಲಿಸಲಾಗುತ್ತಿದೆ ಎಂದು ಭಾರತ ಹೇಳಿದೆ.