ಕೊಚ್ಚಿ: ಕೊಚ್ಚಿಯ ಕಾಕ್ಕನಾಡ್‌ನಲ್ಲಿರುವ 15 ಅಂತಸ್ತಿನ ವಸತಿ ಕಟ್ಟಡವೊಂದರಲ್ಲಿ ಕಲುಷಿತ ನೀರು ಸೇವಿಸಿ 25 ಮಕ್ಕಳು ಸೇರಿದಂತೆ 300 ಕ್ಕೂ ಹೆಚ್ಚು ನಿವಾಸಿಗಳು ಅಸ್ವಸ್ಥಗೊಂಡಿರುವ ಘಟನೆ ಮಂಗಳವಾರ ವರದಿಯಾಗಿದೆ.
ಕುಡಿಯುವ ನೀರಿನಲ್ಲಿ ಕೋಲಿ ಫಾರ್ಮ್ ಅಂಶ ಇರುವ ಶಂಕೆಯಿದ್ದು, ಇದರಿಂದ ಜನರು ಅಸ್ವಸ್ಥರಾಗಿರಬಹುದು ಎಂದು ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.
ಅಪಾರ್ಟ್ ಮೆಂಟ್ ನಲ್ಲಿ ಸುಮಾರು 1,000 ಫ್ಲ್ಯಾಟ್ ಗಳಿದ್ದು, ಎಲ್ಲಾ ಫ್ಲ್ಯಾಟ್ ಗಳ ಮೇಲೂ ಪರಿಣಾಮ ಬೀರಿದೆ ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.
ಕಾಕ್ಕನಾಡು ಪುರಸಭಾ ಸದಸ್ಯ ಸಿ ಸಿ ವಿಜು ಮಾತನಾಡಿ, ಕುಡಿಯುವ ನೀರು ಕಲುಷಿತವಾಗಿರುವುದು ಘಟನೆಗೆ ಕಾರಣವೆಂದು ಶಂಕಿಸಲಾಗಿದೆ. ಇದೀಗ ನೀರಿನ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಯ ನಂತರವಷ್ಟೇ ಸ್ಪಷ್ಟ ಮಾಹಿತಿ ಸಿಗುತ್ತದೆ ಎಂದು ಹೇಳಿದ್ದಾರೆ.
ಅಪಾರ್ಟ್ ಮೆಂಟ್ ಕೇರಳ ಜಲ ಪ್ರಾಧಿಕಾರದಿಂದ ಒಂದು ಸಂಪರ್ಕವನ್ನು ಮಾತ್ರ ಹೊಂದಿದ್ದು, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿತ್ತು ಎಂದು ತಿಳಿಸಿದ್ದಾರೆ.ಅಪಾರ್ಟ್‌ಮೆಂಟ್‌ಗೆ ಆರೋಗ್ಯಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭೇಟಿ ನೀಡಿದ್ದು, ಪರಿಸ್ಥಿತಿ ಅವಲೋಕಿಸಿದ್ದಾರೆ ಎಂದು ಹೇಳಿದ್ದಾರೆ.
ಇನ್ಫೋಪಾರ್ಕ್‌ನಲ್ಲಿ ಕೆಲಸ ಮಾಡುತ್ತಿರುವ ನಿವಾಸಿ ನಿಕಿತಾ ಜಾಯ್ ಎಂಬುವವರು ಮಾತನಾಡಿ, ನಿನ್ನೆಯಿಂದ ವಾಂತಿ ಭೇದಿಯಿಂದ ಬಳಲುತ್ತಿದ್ದೇನೆ, ಇ-ಕೋಲಿ ಬ್ಯಾಕ್ಟೀರಿಯಾದಿಂದ ಸೋಂಕು ಉಂಟಾಗಿದೆ ಎಂದು ಹೇಳಲಾಗುತ್ತಿದೆ ಎಂದು ಹೇಳಿದ್ದಾರೆ.
ನೀರಿನ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವ ಮತ್ತು ಸೋಂಕು ನಿವಾರಣಾ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳುತ್ತಿದ್ದಾರೆ. ಆರೋಗ್ಯ ತಪಾಸಣೆ ಮತ್ತು ಔಷಧಿಗಳನ್ನು ಶಿಫಾರಸು ಮಾಡಲು ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರ ತಂಡವು ಸ್ಥಳಕ್ಕೆ ಬರಲಿದ್ದಾರೆಂದೂ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಪುರಸಭೆಯ ಅಧಿಕಾರಿಗಳು ಮಾತನಾಡಿ, ಏಕಾಏಕಿ ಮಳೆಯಿಂದಾಗಿ ನೀರು ಕಲುಷಿತಗೊಂಡಿರುವ ಸಾಧ್ಯತೆಗಳಿವೆ. ಆದರೆ, ನಿಖರ ಕಾರಣಗಳು ಸಂಪೂರ್ಣ ತನಿಖೆಯ ನಂತರವೇ ತಿಳಿದುಬರಲಿದೆ ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಜಿಲ್ಲಾ ವೈದ್ಯಾಧಿಕಾರಿ ಡಾ.ಸಕೀನಾ ಮಾತನಾಡಿ, ಇ-ಕೋಲಿ ಅಥವಾ ಬ್ಯಾಕ್ಟೀರಿಯಾದಿಂದ ಜನರು ಅಸ್ವಸ್ಥಗೊಂಡಿದ್ದಾರೆ. ನೀರಿನ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರವೇ ಸ್ಪಷ್ಟ ಚಿತ್ರಣ ಸಿಗಲಿದೆ. ನೀರಿನಲ್ಲಿ ಇತರ ಸೂಕ್ಷ್ಮಜೀವಿಗಳ ಉಪಸ್ಥಿತಿ ಇದೆಯೇ ಎಂದು ನಾವು ಪರಿಶೀಲಿಸುತ್ತಿದ್ದೇವೆ. ಆದಾಗ್ಯೂ, ನೀರಿನಿಂದ ಹರಡುವ ಸೋಂಕಿನಿದಲೇ ಜನರು ಅಸ್ವಸ್ಥಗೊಂಡಿದ್ದಾರೆಂದು ದೃಢಪಡಿಸಿದ್ದಾರೆ.